ರಾಣೆಬೆನ್ನೂರು: ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪುತ್ಥಳಿ ಕಸ-ಕಡ್ಡಿಗಳ ನಡುವೆ ಅನಾಥವಾಗಿದ್ದು, ಅವರ ಜಯಂತಿ ದಿನದಂದು ಮಾತ್ರ ಸ್ವಚ್ಛಗೊಳಿಸಿ ಪೂಜಿಸಲಾಗುತ್ತದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಮಹಾತ್ಮ ಗಾಂಧಿಯವರ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಅಲ್ಲದೆ ಮೂರ್ತಿ ಇಟ್ಟಿರುವ ಸ್ಥಳಕ್ಕೆ ಗಾಂಧಿ ಸರ್ಕಲ್ ಎಂದು ಹೆಸರು ಕೂಡ ಇಡಲಾಗಿದೆ. ವಿಪರ್ಯಾಸವೆಂದರೆ ಈ ಪುತ್ಥಳಿ ವರ್ಷಪೂರ್ತಿ ಅನಾಥವಾಗಿರುತ್ತಿದ್ದು, ಅಕ್ಟೋಬರ್ 2 ರಂದು ಮಾತ್ರ ಇಲ್ಲಿ ಪೂಜೆ, ಸ್ವಚ್ಛತೆ ನಡೆಯುತ್ತಿರುವುದು ನೋವಿನ ಸಂಗತಿಯಾಗಿದೆ.
ಸುಮಾರು ಹತ್ತು ಸಾವಿರ ಜನಸಂಖ್ಯೆ ಹೊಂದಿರುವ ಮೆಡ್ಲೇರಿ ಗ್ರಾಮದಲ್ಲಿನ ಗ್ರಾಮ ಪಂಚಾಯತ್ ಎದುರು ಇರುವ ಗಾಂಧಿ ಮೂರ್ತಿ ಪಕ್ಕದಲ್ಲಿ ಮೀನು ಮಾರುಕಟ್ಟೆ ಇದೆ. ಇದರಿಂದ ದಿನನಿತ್ಯ ನಾಯಿಗಳು ಬಂದು ಮಲಗುತ್ತಿದ್ದು, ಆವರಣವನ್ನು ಗಲೀಜು ಮಾಡುತ್ತಿವೆ. ಆದರೆ ಗ್ರಾಮ ಪಂಚಾಯತ್ ಸಿಬ್ಬಂದಿ ಮಾತ್ರ ಗಾಂಧಿಯವರ ಮೂರ್ತಿಯನ್ನು ಸ್ವಚ್ಛತೆ ಆಗಲಿ, ಪೂಜೆ ಮಾಡುವುದಾಗಲಿ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.