ರಾಣೆಬೆನ್ನೂರು: ಲಾಕ್ಡೌನ್ ಎಫೆಕ್ಟ್ ಯಾರನ್ನೂ ಬಿಟ್ಟಿಲ್ಲ ಎನ್ನುವಂತೆ ಸದ್ಯ ಬಟ್ಟೆ ನೇಯುವವರು ಸಹ ಹೊಟ್ಟೆಗೆ ಹಿಟ್ಟಿಲ್ಲದಂತೆ ಜೀವನ ನಡೆಸುವಂತಾಗಿದೆ.
ನಗರದ ಸಿದ್ದೇಶ್ವರ ನಗರ ಸೇರಿದಂತೆ ತಾಲೂಕಿನಲ್ಲಿರುವ ನೇಕಾರರ ಬದುಕು ಸಂಕಷ್ಟದಲ್ಲಿದೆ. ಕಳೆದ ಒಂದೂವರೆ ತಿಂಗಳಿನಿಂದ ದೇಶಾದ್ಯಂತ ಕೊರೊನಾ ಹಿನ್ನೆಲೆ ಲಾಕಡೌನ್ ಆದೇಶ ಪಾಲನೆಯಾಗುತ್ತಿರುವ ಪರಿಣಾಮ ಕೈಗೆ ಕೆಲಸವಿಲ್ಲದಂತಾಗಿದೆ. ಸದ್ಯ ನೇಕಾರರು ನೂರಾರು ಸೀರೆಗಳನ್ನು ಸಿದ್ಧಪಡಿಸಿದ್ದಾರೆ. ಆದರೆ ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ.
ನಗರದಲ್ಲಿ ಸಾವಿರಾರು ನೇಕಾರ ಕುಟುಂಬಗಳು ದಿನನಿತ್ಯ ಹುಬ್ಬಳ್ಳಿ ಸೀರೆ(ಗಟ್ಟಿ ಸೀರೆ) ಸಿದ್ಧಪಡಿಸುತ್ತಾರೆ. ಒಂದು ಸೀರೆ ಸಿದ್ಧಪಡಿಸಬೇಕಾದರೆ ಸುಮಾರು 650 ರೂ. ಖರ್ಚಾಗುತ್ತದೆ. ಈಗ ಮಾರುಕಟ್ಟೆ ಹಾಗೂ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ನೇಕಾರರ ಬದುಕು ಅತಂತ್ರವಾಗಿದೆ ಎನ್ನುತ್ತಾರೆ ನೇಕಾರರು. ದಿನನಿತ್ಯ ನೇಕಾರಿಕೆಯನ್ನೇ ನಂಬಿ ಜೀವನ ಸಾಗಿಸುವ ಕುಟುಂಬಗಳಿಗೆ ಆಸರೆ ಬೇಕಾಗಿದ್ದು, ಸರ್ಕಾರ ಮತ್ತು ಜನಪ್ರತಿನಿಧಿಗಳು ಇವರತ್ತ ಗಮನ ಹರಿಸಬೇಕಾಗಿದೆ.