ಹಾವೇರಿ : ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಗ್ರಾಮೀಣ ಸೊಗಡನ್ನ ಹೊಂದಿದೆ. ಇಲ್ಲಿನ ಆರ್ಥಿಕತೆ ವ್ಯವಸಾಯದ ಮೇಲೆ ನಿಂತಿದೆ. ಜಿಲ್ಲೆಯಲ್ಲಿ 70 ಪ್ರತಿಶತಕ್ಕೂ ಅಧಿಕ ಜನರಿಗೆ ಕೃಷಿ ಉದ್ಯೋಗ ನೀಡಿದೆ. ಕೃಷಿಯೇ ಜೀವಾಳವಾಗಿರುವ ಜಿಲ್ಲೆಯಲ್ಲಿ ಇದೀಗ ರೈತರ ಜೀವನ ಕಟ್ಟಿಕೊಡುವ ಹೊಸ ಸಿನಿಮಾ ಕರ್ಣಾರ್ಜುನ ನಿರ್ಮಾಣ ಮಾಡಲಾಗುತ್ತಿದೆ. ಚಿತ್ರೀಕರಣ ಮುಂದಿನ ತಿಂಗಳಿನಿಂದ ಆರಂಭವಾಗಲಿದೆ ಎಂದು ಚಿತ್ರತಂಡ ಹೇಳಿದೆ.
ಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಶಿಗ್ಗಾವಿ ತಾಲೂಕಿನ ಶ್ಯಾಡಂಬಿಯ ತೋಟದಲ್ಲಿ ನಡೆಯಿತು. ಚಿತ್ರವನ್ನ ಆರ್ಯ ಮೀಡಿಯಾ ವಿಷನ್ ಬ್ಯಾನರ್‌ನಲ್ಲಿ ನಿರ್ಮಿಸಲಾಗುತ್ತಿದೆ. ಹಾವೇರಿ ಜಿಲ್ಲೆಯ ಯುವನಟ ವರುಣ ಪಾಟೀಲ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಕರ್ಣಾರ್ಜುನ ಚಿತ್ರಕ್ಕೆ ಸಿರಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಬಸವರಾಜ್ ಕುರಗೋಡಿ ಚಿತ್ರವನ್ನು ನಿರ್ಮಿಸುತ್ತಿದ್ದು, ಗುರುರಾಜ್ ಸೋಮಣ್ಣನವರ್ ಚಿತ್ರದ ನಿರ್ದೇಶನ ಮಾಡಲಿದ್ದಾರೆ.
ಕರ್ಣಾರ್ಜುನ ಚಿತ್ರದ ಕಥೆ ಮತ್ತು ಚಿತ್ರಕಥೆಯನ್ನು ಸಹ ನಿರ್ದೇಶಕ ಗುರುರಾಜ್ ರಚಿಸಿದ್ದು, ಚಿತ್ರದ ಚಿತ್ರೀಕರಣ ಬಹುತೇಕ ಹಾವೇರಿ ಜಿಲ್ಲೆಯ ಗ್ರಾಮೀಣ ಸೊಗಡಿನಲ್ಲಿ ನಡೆಯಲಿದೆ. ಚಿತ್ರದಲ್ಲಿ ರೈತನ ಕುರಿತು ಮಹತ್ವವಾದ ಸಂದೇಶವಿದ್ದು, ರೈತರಿಗಾಗಿಯೇ ಈ ಸಿನಿಮಾ ನಿರ್ಮಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಅನ್ನದಾತನ ಜೀವನ, ಸರ್ಕಾರದ ನಿಲುವುಗಳು, ಸಂಕಷ್ಟಗಳು ಅವುಗಳನ್ನು ರೈತ ಯಾವ ರೀತಿ ಎದುರಿಸಬೇಕು ಎನ್ನುವ ಕುರಿತಂತೆ ಚಿತ್ರದಲ್ಲಿ ಕಥೆ ಹೆಣೆಯಲಾಗಿದೆ ಎಂದು ಹೇಳಲಾಗಿದೆ. ಅನ್ನದಾತನ ಪಾತ್ರದಲ್ಲಿ ನಟಿಸುವುದಕ್ಕೆ ನಾಯಕನಟ ವರುಣ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ತಾನು ಕೃಷಿ ಕುಟುಂಬದಲ್ಲಿ ಜನಿಸಿದ್ದು, ರೈತನ ಪಾತ್ರಕ್ಕೆ ಜೀವ ತುಂಬುವ ಇಂಗಿತವನ್ನ ವರುಣ ವ್ಯಕ್ತಪಡಿಸಿದ್ದಾರೆ.
ಇನ್ನು ಚಿತ್ರದ ನಾಯಕಿ ಸಿರಿ ಅವರಿಗೆ ಇದು ಕನ್ನಡದ ಮೂರನೇ ಸಿನಿಮಾ. ತೆಲುಗು ಮತ್ತು ತಮಿಳಿನಲ್ಲಿ ಒಂದೊಂದು ಚಿತ್ರಕ್ಕೆ ಸಿರಿ ಅಭಿನಯಿಸಿದ್ದಾರೆ. ಕರ್ಣಾರ್ಜುನ ಚಿತ್ರದ ಒಂದೇ ಒಂದು ಲೈನ್ ಕೇಳಿ ನಾಯಕನಟಿಯಾಗಿ ಅಭಿನಯಿಸಲು ಒಪ್ಪಿಕೊಂಡೆ ಅಂತಾರೆ ಸಿರಿ. ಕರ್ಣಾರ್ಜುನ ಚಿತ್ರದ ಚಿತ್ರೀಕರಣ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಲಿದೆ. ಮುಂಗಾರು ವೇಳೆಗೆ ಅಂತಿಮಗೊಳ್ಳಲಿದೆ ಎಂದು ಚಿತ್ರತಂಡ ಹೇಳಿದೆ.