ಹಾವೇರಿ: ಅಖಿಲ ಭಾರತ 86ನೇ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದೆ. ಸಾಹಿತ್ಯ ಸಮ್ಮೇಳನವನ್ನು ಅಭೂತಪೂರ್ವಗೊಳಿಸಲು ಕನ್ನಡ ಸಾಹಿತ್ಯ ಪರಿಷತ್ ಮತ್ತು ಹಾವೇರಿ ಜಿಲ್ಲಾಡಳಿತ ಶ್ರಮಿಸುತ್ತಿದೆ. ಇದೇ ಪ್ರಥಮ ಬಾರಿಗೆ ಸಾಹಿತ್ಯ ಪರಿಷತ್ ಕನ್ನಡ ತಾಯಿಯ ರಥಯಾತ್ರೆ ನಡೆಸಲು ಮುಂದಾಗಿದೆ. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಭುವನಗಿರಿಯ ಭುವನೇಶ್ವರಿ ದೇವಸ್ಥಾನದಿಂದ ರಥಯಾತ್ರೆ ಆರಂಭವಾಗಲಿದೆ.
ಡಿಸೆಂಬರ್ 1 ರಿಂದ(ನಾಳೆಯಿಂದ) ಭುವನಗಿರಿಯಿಂದ ಪಯಣ ಆರಂಭಿಸುವ ಕನ್ನಡ ರಥ ಹಾವೇರಿ ಜಾನಪದ ವಿವಿ ಆವರಣದಲ್ಲಿ ಸಿದ್ಧವಾಗುತ್ತಿದೆ. ಸಾರಿಗೆ ಇಲಾಖೆಯ ತೆರೆದ ಬಸ್‌ನಲ್ಲಿ ಕನ್ನಡದ ರಥ ಸಜ್ಜುಗೊಂಡಿದೆ. ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದ ಗಣ್ಯರ ಭಾವಚಿತ್ರಗಳನ್ನು ರಥದಲ್ಲಿ ಹಾಕಲಾಗಿದೆ.
ಗಣ್ಯರ ಭಾವಚಿತ್ರ: ಮತ್ತೊಂದು ಕಡೆ ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ, ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಷಿ, ಮತ್ತು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಭಾವಚಿತ್ರ ಹಾಕಲಾಗಿದೆ. ಮತ್ತೊಂದು ಕಡೆ ಸಿಎಂ ಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲಕುಮಾರ್, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಭಾವಚಿತ್ರ ಹಾಕಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲೆಗೂ ಸಂಚಾರ: ರಥದ ಎರಡು ಕಡೆ ಎಲ್ಇಡಿ ಸ್ಕ್ರೀನ್ ಅಳವಡಿಸಲಾಗಿದೆ. ಗುರುವಾರದಿಂದ ಯಾತ್ರೆ ಆರಂಭಿಸುವ ರಥ ರಾಜ್ಯದ 31 ಜಿಲ್ಲೆಗಳಿಗಳಲ್ಲೂ ಸಂಚರಿಸಲಿದೆ. ಪ್ರತಿ ಜಿಲ್ಲೆಗೆ ರಥ ಆಗಮಿಸಿದಾಗ ಜಿಲ್ಲಾಡಳಿತ ಜಿಲ್ಲಾ ಕಸಾಪ ರಥವನ್ನು ಬರಮಾಡಿಕೊಳ್ಳಲಿದ್ದಾರೆ.
ಡಿಸೆಂಬರ್ 31 ರಂದು ಹಾವೇರಿ ಜಿಲ್ಲೆಗೆ ಆಗಮಿಸುವ ರಥ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಸಂಚರಿಸಲಿದೆ. ನಂತರ ಜನವರಿ 6 ರಂದು ಸಮ್ಮೇಳನದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ. ಸಾಹಿತ್ಯ ಸಮ್ಮೇಳನಕ್ಕೆ ರಥಯಾತ್ರೆಯಲ್ಲಿರುವ ಜ್ಯೋತಿಯಿಂದ ಜ್ಯೋತಿ ಬೆಳಗಿಸುವ ಮೂಲಕ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಷಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಕರ್ನಾಟಕ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ