ಹಾವೇರಿ : ಕಳೆದ ಹಲವು ವರ್ಷಗಳಿಂದ ಮಲೀನಗೊಂಡಿದ್ದ ರಟ್ಟಿಹಳ್ಳಿ ತಾಲೂಕಿನ ಕಣವಿಸಿದ್ದಗೇರಿ ಸಣ್ಣ ಗ್ರಾಮದ ಕೆರೆಯನ್ನ ಗ್ರಾಮ ಪಂಚಾಯತ್‌ಗೆ ಆಯ್ಕೆಯಾದ ನಾಲ್ಕು ಯುವ ಸದಸ್ಯರು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸ್ವಚ್ಛಗೊಳಿಸಿದ್ದಾರೆ.
ಕಣವಿಸಿದ್ದಗೇರಿ ಸಣ್ಣ ಗ್ರಾಮದಲ್ಲಿ ಒಂದು ಎಕರೆ ವಿಸ್ತೀರ್ಣದ ಕೆರೆ ಕಳೆದ ಹಲವು ವರ್ಷಗಳಿಂದ ಮಲೀನಗೊಂಡಿತ್ತು. ಈ ಕುರಿತು ಗ್ರಾಮ ಪಂಚಾಯತ್‌ಗೆ ಆಯ್ಕೆಯಾದ ನಾಲ್ಕು ಯುವ ಸದಸ್ಯರು, ಪಿಡಿಒ, ನರೇಗಾ ಸಂಯೋಜಕರು ಮತ್ತು ಜಿಲ್ಲಾ ಪಂಚಾಯತ್ ಸಿಇಒ ಮಾರ್ಗದರ್ಶನದಲ್ಲಿ ಕೆರೆ ಸೌಂದರ್ಯಕ್ಕೆ ಒತ್ತು ಕೊಟ್ಟಿದ್ದಾರೆ. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 9 ಲಕ್ಷ ರೂ. ಉಪಯೋಗಿಸಿ ಕೆರೆಯನ್ನ ಸುಂದರ ತಾಣವಾಗಿ ಮಾಡಿದ್ದಾರೆ.
ಕೆರೆಯ ಮೇಲ್ಭಾಗದ ಸುತ್ತಲೂ ಓಡಾಡಲು ಕಾರಿಡಾರ್ ನಿರ್ಮಿಸಲಾಗಿದೆ. ಅಲ್ಲದೇ, ಕೆರೆಯ ಆವರಣದ ಸುತ್ತ ತಂತಿ ಬೇಲಿ ಹಾಕಿ ಗಿಡಗಳನ್ನ ನೆಟ್ಟಿದ್ದಾರೆ. ಜೊತೆಗೆ ಕಾರಿಡಾರ್ ಉದ್ದಕ್ಕೂ ಸುಮಾರು 30 ಆಸನಗಳಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ಗ್ರಾಮಸ್ಥರು ಮುಂಜಾನೆ ಮತ್ತು ಸಂಜೆ ವೇಳೆ ವಾಯುವಿಹಾರ ಮಾಡುತ್ತಾರೆ. ಅಷ್ಟೇ ಅಲ್ಲ, ಕೆರೆಯ ಪಕ್ಕದಲ್ಲಿ ಸರ್ಕಾರಿ ಶಾಲೆಯಿದೆ. ಶಿಕ್ಷಕರ ಮಾರ್ಗದರ್ಶನದಲ್ಲಿ ಕೆರೆಯ ಒಡ್ಡಿನ ಮೇಲೆ ಇರುವ ಆಸನಗಳ ಮೇಲೆ ಕುಳಿತು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ನರೇಗಾ ಯೋಜನೆಯಿಂದ ಕೆರೆಯ ಚಿತ್ರಣವೇ ಬದಲಾಗಿದೆ. ಗ್ರಾಮಸ್ಥರಿಗೆ ಕೆರೆ ಆಕರ್ಷಣೀಯ ಕೇಂದ್ರವಾಗಿ ಮಾರ್ಪಟ್ಟಿದೆ.