ರಾಣೆಬೆನ್ನೂರು: ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಭ್ರಷ್ಟಾಚಾರ, ಜನ ವಿರೋಧಿ ನೀತಿ ಕಾನೂನುಗಳನ್ನು ತರುತ್ತಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ ಕೋಳಿವಾಡ ಹೇಳಿದರು.
ಮಾಜಿ ಪ್ರಧಾನಿ ರಾಜೀವಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ದಿನಾಚರಣೆ ಅಂಗವಾಗಿ ಜನಧ್ವನಿ ಕಾರ್ಯಕ್ರಮದಡಿಯಲ್ಲಿ ಬಿಜೆಪಿ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರೈತ ವಿರೋಧಿ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ರೈತರ ಮೇಲೆ ಬರೆ ಎಳೆದಂತಾಗಿದೆ. ಇದರ ಜತೆಗೆ ಎಪಿಎಂಸಿ ತಿದ್ದುಪಡಿ, ಕಾರ್ಮಿಕ ವಿರೋಧಿಯಂತಹ ಕಾನೂನು ಜಾರಿಗೆ ತರುವ ಮೂಲಕ ರಾಜ್ಯದ ಜನರ ವಿರೋಧಿ ಸರ್ಕಾರವಾಗಿದೆ.
ರಾಜ್ಯದಲ್ಲಿ ಅತಿವೃಷ್ಠಿ ಪರಿಹಾರ ಮತ್ತು ಕೊರೊನಾ ನಿಯಂತ್ರಣ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಇದರಲ್ಲಿ ಭ್ರಷ್ಟಾಚಾರಕ್ಕೆ ನಿಂತಿದೆ ಎಂದು ಆರೋಪಿಸಿದರು. ಸರ್ಕಾರ ಇಂತಹ ನೀತಿಗಳನ್ನು ಕೈ ಬಿಟ್ಟು ಜನರ ಕಷ್ಟಗಳಿಗೆ ಪರಿಹಾರ ನೀಡಬೇಕು ಎಂದು ಪ್ರತಿಭಟನೆ ಮೂಲಕ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯರಾದ ನಿಂಗರಾಜ ಕೋಡಿಹಳ್ಳಿ, ಪುಟ್ಟಪ್ಪ ಮರಿಯಮ್ಮನವರ, ಮಂಜನಗೌಡ ಪಾಟೀಲ, ಕೃಷ್ಣಪ್ಪ ಕಂಬಳಿ, ನಾಗರಾಜ ಕುಡಪಲಿ ಹಾಜರಿದ್ದರು.