ಹಾವೇರಿ:ರಾಜ್ಯ ಹಾಳಾದರೂ ಚಿಂತೆಯಿಲ್ಲ, ಕಾಂಗ್ರೆಸ್‌ನವರು ಲೋಕಸಭಾ ಚುನಾವಣೆ ಬರುವವರಗೆ ಮಾತ್ರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಿ ಸಿ ಪಾಟೀಲ್ ಆರೋಪಿಸಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತಂತೆ ಸಿಎಂ ಕಾಂಗ್ರೆಸ್ ಶಾಸಕರಿಗೆ ಯಾವುದೇ ಅಭಿವೃದ್ದಿ ಕಾರ್ಯಗಳಿಗೆ ದುಡ್ಡು ಕೇಳಬೇಡಿ ಎಂದು ಹೇಳಿದ್ದಾರಂತೆ. ರಾಜ್ಯವನ್ನೂ ದಿವಾಳಿ ಮಾಡಿ ರಾಜ್ಯದ ಅಭಿವೃದ್ದಿ ಕುಂಠಿತಗೊಳಿಸಿ ಅಧಿಕಾರ ಅನುಭವಿಸಬೇಕು ಎನ್ನುವ ಕಾಂಗ್ರೆಸ್‌ನ ನಿಲುವು ರಾಜ್ಯಕ್ಕೆ ಮಾಡುತ್ತಿರುವ ದೊಡ್ಡ ದ್ರೋಹ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನೂತನ ಸರ್ಕಾರ ಬಿಜೆಪಿ ಸರ್ಕಾರದಲ್ಲಿ ಒಂದು ಕೋಟಿ ರೂಪಾಯಿ ಮೇಲಿನ ಯೋಜನೆಗಳ ಪರಿಶೀಲನೆಗೆ ಮುಂದಾಗಿದೆ. ಒಂದು ಕೋಟಿಯಲ್ಲ ಐವತ್ತು ಕೋಟಿ ವರೆಗಿನ ಯೋಜನೆಗಳನ್ನು ಪರಿಶೀಲನೆ ಮಾಡಲಿ. ಆದರೆ ಅಭಿವೃದ್ದಿ ಕಾರ್ಯಗಳನ್ನು ನಿಲ್ಲಿಸಬಾರದು ಎಂದು ಪಾಟೀಲ್ ಆಗ್ರಹಿಸಿದರು.
ಗ್ಯಾರಂಟಿ ನೆಪದಲ್ಲಿ ಅಭಿವೃದ್ದಿ ಕಾರ್ಯಗಳನ್ನು ತಡೆದರೇ, ನಾವು ಬೀದಿಗೆ ಇಳಿಯಬೇಕಾಗುತ್ತದೆ. ಅಧಿಕಾರಕ್ಕೆ ಬಂದು ಮೊದಲ ಕ್ಯಾಬಿನೆಟ್‌ನಲ್ಲಿ 5 ಗ್ಯಾರಂಟಿ ಯೋಜನೆ ತರುವುದಾಗಿ ಕಾಂಗ್ರೆಸ್ ಘೋಷಿಸಿದೆ. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 11 ದಿನವಾದರೂ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುತ್ತಿಲ್ಲ ಎಂದು ಪಾಟೀಲ್ ಆರೋಪಿಸಿದರು.
ಸುಳ್ಳು ಗ್ಯಾರಂಟಿ ನೀಡಿ ಜನರಿಗೆ ಮೋಸ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸಚಿವ ಜಾರಕಿಹೊಳಿ ಗ್ಯಾರಂಟಿ ಕಾರ್ಡ್ ನೀಡಿದಂತೆ ಯೋಜನೆಗಳನ್ನು ಎಲ್ಲರಿಗೂ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಅಧಿಕಾರಕ್ಕೆ ಬರುವವರೆಗೆ ಒಂಥರಾ ಅಧಿಕಾರಕ್ಕೆ ಬಂದ ಮೇಲೆ ಒಂದು ತರಹ ಇದ್ದಾರೆ ಎಂದು ಪಾಟೀಲ್ ಆರೋಪಿಸಿದರು.
ಸತ್ಯ ಬಾಗಿಲಿನಿಂದ ಹೊರಗೆ ಬರುವಷ್ಟರಲ್ಲಿ ಸುಳ್ಳು ಊರು ತಿರುಗಿರುತ್ತೆ ಎನ್ನುವ ಹಾಗೆ, ನಾವು ಮಾಡಿದ ಅಭಿವೃದ್ದಿ ಕಾರ್ಯಗಳು ತಲುಪುವ ಮೊದಲೇ ಕಾಂಗ್ರೆಸ್ ಸುಳ್ಳು ಮತದಾರರನ್ನ ತಲುಪಿದ್ದರಿಂದ ಬಿಜೆಪಿಗೆ ಸೋಲಾಯಿತು ಎಂದು ಮಾಜಿ ಸಚಿವ ಬಿ ಸಿ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಷ್ಟ್ರಕ್ಕಾಗಿ ಹೋರಾಟ ಮಾಡಿದವರ ಇತಿಹಾಸ ಸೇರಿದಂತೆ ಹಲವು ಮಾರ್ಪಾಡುಗಳನ್ನು ಬಿಜೆಪಿ ಸರ್ಕಾರಿ ಪಠ್ಯಪುಸ್ತಕದಲ್ಲಿ ತಂದಿದೆ. ಅದನ್ನ ಬದಲಾಯಿಸಲು ಹೊರಟರೆ ಕಾಂಗ್ರೆಸ್ ಅದರ ದುಷ್ಪರಿಣಾಮಗಳನ್ನ ಅನುಭವಿಸಲಿದೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಇದೇ ವೇಳೆ ಎಚ್ಚರಿಕೆ ನೀಡಿದರು.
ಕಾಂಗ್ರೆಸ್‌ನವರು ಹೇಳಿದ್ದನ್ನು ಎಂದು ಮಾಡುವುದಿಲ್ಲ. ಈಗ ನೀಡಿರುವ ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತರಲು ಆಗುತ್ತಿಲ್ಲ . ಹಾವೇರಿ ಜಿಲ್ಲೆಯಲ್ಲಿ ಐದು ಜನ ಶಾಸಕರಿದ್ದರೂ, ಕಾಂಗ್ರೆಸ್ ಸರ್ಕಾರ ಒಬ್ಬರಿಗೆ ಸಹ ಸಚಿವ ಸ್ಥಾನ ನೀಡದಿರುವುದು ಹಾವೇರಿ ಜಿಲ್ಲೆಯ ದೌರ್ಭಾಗ್ಯ. ಕಾಂಗ್ರೆಸ್‌ನ ಈ ನಿರ್ಧಾರದಿಂದ ಹಾವೇರಿ ಜಿಲ್ಲೆ ಅಭಿವೃದ್ದಿಯಲ್ಲಿ ಹಿಂದೆ ಬೀಳುತ್ತೆ ಎಂದು ಆರೋಪಿಸಿದರು.
ಉಪಯೋಗಿಸಿ ಬಿಸಾಕಿದ ಕಾಂಗ್ರೆಸ್: ಗುತ್ತಿಗೆದಾರರು ನಮ್ಮ ಮೇಲೆ 40 ಪ್ರತಿಶತ ಲಂಚ ನೀಡಬೇಕು ಎಂದು ಆರೋಪಿಸಿದವರ ಬಿಲ್ ತಡೆ ಹಿಡಿಯುವ ಮೂಲಕ ಗುತ್ತಿಗೆದಾರರನ್ನು ಕಾಂಗ್ರೆಸ್ ಉಪಯೋಗಿಸಿ ಬಿಸಾಕಿದೆ. ನಾನು 2023 ರ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುತ್ತೇನೆ. ಗೆದ್ದ ಮೇಲೆ ಐದು ವರ್ಷದ ನಂತರ ರಾಜೀನಾಮೆ ನೀಡುತ್ತೇನೆ ಎಂದಿದ್ದೆ. ಆದರೆ ಕಾರ್ಯಕರ್ತರ ಸ್ಥಿತಿ ಅವರ ಒತ್ತಾಯಕ್ಕೆ ಮಣಿದು ಈ ನಿರ್ಧಾರದಿಂದ ಹಿಂದೆ ಸರಿಯುತ್ತಿದ್ದೇನೆ ಎಂದ ಬಿ ಸಿ ಪಾಟೀಲ್ , ಬರುವ ಚುನಾವಣೆಯಲ್ಲಿ ಸ್ಪರ್ಧಿಸಿ ಮತ್ತೆ ಐದು ವರ್ಷ ಅಧಿಕಾರ ನಡೆಸಿ ನಂತರ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ಹಾವೇರಿ ಲೋಕಸಭೆ ಚುನಾವಣೆಗೆ ನನ್ನನ್ನ ಪಕ್ಷ ಸ್ಪರ್ಧಿಸಲು ಅವಕಾಶ ನೀಡಿದರೇ ಸ್ಪರ್ಧಿಸುವದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಪರ್ಧಿಸುವುದರಲ್ಲಿ ಯಾವ ತಪ್ಪಿದೆ, ಈಗ ಖಾಲಿ ಇದ್ದೇನಿ. ಎಂಪಿ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕರೆ ಸ್ಪರ್ಧಿಸುವುದಾಗಿ ಬಿ.ಸಿ.ಪಾಟೀಲ್ ಆಶಾಭಾವನೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ನೀಡಿದ ಪಂಚ ಗ್ಯಾರಂಟಿ ಯೋಜನೆಗಳ ಚರ್ಚೆ ಕ್ಯಾಬಿನೆಟ್ದಲ್ಲಿ ಆಗುತ್ತದೆ. ಆದರೆ, ಅದು ಕಾರ್ಯರೂಪಕ್ಕೆ ಬರುವುದಿಲ್ಲ. ಸಿಎಂ ಸಿದ್ದರಾಮಯ್ಯ ಆರ್ಥಿಕ ತಜ್ಞರು, ಚುನಾವಣೆ ಮುನ್ನ ಗ್ಯಾರಂಟಿ ಕಾರ್ಡ್ ಮೇಲೆ ಸಹಿ ಹಾಕಿ ನೀಡಿದ್ದಾರೆ, ಆದರೆ ಗ್ಯಾರಂಟಿ ಕಾರ್ಡ್ ನೀಡುವಾಗ ಇಲ್ಲದ ಷರತ್ತುಗಳು ಅದನ್ನೂ ಜಾರಿಗೆ ತರುವಾಗ ಯಾಕೆ ಎಂದು ಪಾಟೀಲ್ ಪ್ರಶ್ನಿಸಿದ್ದಾರೆ.
ಇದನ್ನೂಓದಿ:ನಾನು ಡಿಪ್ರೆಶನ್ಗೆ ಹೋಗುವುದಿಲ್ಲ, ಡಿಪ್ರೆಶನ್ಗೆ ಕಳುಹಿಸುತ್ತೇನೆ : ಮಾಜಿ ಸಿಎಂ ಜಗದೀಶ್ ಶೆಟ್ಟರ್