ಹಾವೇರಿ: ನಿಮ್ಮೆಲ್ಲರ ಆಶೀರ್ವಾದ ಸಹಕಾರದಿಂದ, ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಇಂದು ಈ ಸ್ಥಾನಕ್ಕೆ ಏರಿದ್ದೇನೆಂದರೆ ಅದರಲ್ಲಿ ಪ್ರಮುಖ ಪಾತ್ರ ನಿಮ್ಮದು. ನಿಮಗೆ ಅನಂತ ಅನಂತ ಧನ್ಯವಾದಗಳು. ಇಡೀ ರಾಜ್ಯದ ಜವಾಬ್ದಾರಿ ನನ್ನ ಮೇಲಿದೆ. ತವರು ಮನೆಯನ್ನು ನಾನೆಂದೂ ಮರೆಯುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಕ್ಷೇತ್ರದ ಜನತೆಗೆ ಧನ್ಯವಾದ ತಿಳಿಸಿದರು.
ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ, ನನ್ನ ತವರುಮನೆಯನ್ನು ಎಂದೂ ಮರೆಯುವುದಿಲ್ಲ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾನು ಕಂಕಣಬದ್ಧನಾಗಿದ್ದೇನೆ. ಕ್ಷೇತ್ರದ ಬಗೆಗಿನ ನನಗಿರುವ ಕನಸುಗಳು ನನಸಾಗುವ ಕಾಲ ಕೂಡಿ ಬಂದಿದ್ದು, ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ. ಬರುವ ಶೈಕ್ಷಣಿಕ ವರ್ಷಕ್ಕೆ ಮಾರ್ಚ್ ನಂತರ ಸರ್ಕಾರಿ ಪದವಿ ಕಾಲೇಜು ನಿರ್ಮಿಸಲಾಗುವುದು. ಇದು ಅತಿದೊಡ್ಡ ಗ್ರಾಮ ಪಂಚಾಯತ್ ಆಗಿದೆ. ಹೀಗಾಗಿ ವಿಶೇಷ ಅನುದಾನ ಬಿಡುಗಡೆಗೊಳಿಸಿ, ಜಾತಿ ಭೇದವಿಲ್ಲದೆ ಎಲ್ಲರ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ನನ್ನ ಜೊತೆಗೆ ಹಿರಿಯರಾದ ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ್, ಬೈರತಿ ಬಸವರಾಜ್ ಬಂದಿದ್ದಾರೆ. ನನ್ನ ಸಂಪುಟದಲ್ಲಿ ಅನೇಕ ಪ್ರತಿಭಾವಂತರಿದ್ದು, ನಮ್ಮ ತಂಡವು ಒಳ್ಳೆಯದಿದೆ. ಅವರೆಲ್ಲರ ಕಾರ್ಯಕ್ಷಮತೆ ಬಳಸಿಕೊಳ್ಳುತ್ತೇನೆ. ಹೊರಗಡೆ ನಾನು ಮುಖ್ಯಮಂತ್ರಿ ಆಗಿರಬಹುದು, ಒಳಗಡೆ ಬಂದಾಗ ನಿಮ್ಮ ಬಸವರಾಜ ಬೊಮ್ಮಾಯಿ ಎಂದು ಕ್ಷೇತ್ರದ ಜನತೆಗೆ ಸಿಎಂ ಹೇಳಿದರು.
ಇದನ್ನೂ ಓದಿ: ಅಡುಗೆ ಅನಿಲ ಮತ್ತಷ್ಟು ತುಟ್ಟಿ: ಇಂದಿನಿಂದಲೇ ಪರಿಷ್ಕೃತ ದರ ಜಾರಿ