ಹಾವೇರಿ: ಯಾವುದೇ ಒಬ್ಬ ವ್ಯಕ್ತಿಗೆ ಮನುಷ್ಯತ್ವ, ತಾಯಿ ಹೃದಯವಿಲ್ಲದಿದ್ರೆ ಹುಟ್ಟಿಯೂ ಉಪಯೋಗವಿಲ್ಲ. ನಾನು ಜೀವನದಲ್ಲಿ ಎಂದೂ ಜಾತಿಯ ಆಧಾರದ ಮೇಲೆ ರಾಜಕಾರಣ ಮಾಡಿಲ್ಲ ಎಂದು ರಟ್ಟಿಹಳ್ಳಿಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
'ಒಂದು ಬಾರಿ ಅಧಿಕಾರ ಕೊಟ್ಟು ನೋಡಿ': ರಾಜ್ಯದಲ್ಲಿ ಕೇವಲ ಮತಕ್ಕೋಸ್ಕರ ಹಲವು ಸಮಸ್ಯೆಗಳನ್ನು ಹುಟ್ಟು ಹಾಕಲಾಗ್ತಿದೆ. ಸಾಲಮನ್ನಾ ಮಾಡೋದು ಹೇಗೆ ಅನ್ನೋದನ್ನು ತೋರಿಸುವ ಉದ್ದೇಶದಿಂದ ನಾನು ಕಾಂಗ್ರೆಸ್ ಜೊತೆ ಕೈಜೋಡಿಸಿದೆ. ಈ ವರ್ಷದ ಕೊನೆಯಲ್ಲಿ ಚುನಾವಣೆ ಬರಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಯಾವುದೇ ಪಕ್ಷದ ಹಂಗಿಲ್ಲದೆ ನಮಗೆ ಒಂದು ಬಾರಿ ಅಧಿಕಾರ ಕೊಟ್ಟು ನೋಡಿ ಎಂದು ಅವರು ಮನವಿ ಮಾಡಿದರು.
ಪ್ರತಿ ಕುಟುಂಬಕ್ಕೆ ಒಂದು ಮನೆ, ಉದ್ಯೋಗ ಸಿಗುವಂತೆ ಮಾಡುತ್ತೇನೆ. ನಾನು ಹದಿನಾಲ್ಕು ತಿಂಗಳು ಸಿಎಂ ಆಗಿದ್ದಾಗ ಕೊಡಗಿನಲ್ಲಿ ಪ್ರಕೃತಿ ವಿಕೋಪವಾಗಿ ಕುಟುಂಬಗಳು ಬೀದಿಗೆ ಬಂದವು. ಆಗ ಅವರಿಗೆ ಮನೆ ಕಟ್ಟಿ ಕೊಟ್ಟೆವು. ಬಿಜೆಪಿಯವರು ನಮ್ಮ ಸರ್ಕಾರ ತೆಗೆದರು. ನನಗೆ ಅದರ ಬಗ್ಗೆ ಬೇಜಾರಿಲ್ಲ ಎಂದರು.
ಇದನ್ನೂ ಓದಿ: ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ, ಹಾಳು ಮಾಡಬೇಡಿ: ಹೆಚ್.ಡಿ.ಕುಮಾರಸ್ವಾಮಿ
ನಿಮ್ಮ ಮಕ್ಕಳಿಗೆ ಬೇಕಾಗಿರೋದು ಉತ್ತಮ ಶಿಕ್ಷಣ: ಮಕ್ಕಳ ಹೃದಯದಲ್ಲಿ ಧರ್ಮದ ವಿಷ ಬೀಜ ಬಿತ್ತಲಾಗುತ್ತಿದೆ. ಕಾಂಗ್ರೆಸ್ನವರು ಜೆಡಿಎಸ್, ಬಿಜೆಪಿ ಬಿ ಟೀಂ ಅಂತಿದ್ದಾರೆ. ಬಿಜೆಪಿಯವರು ನಮ್ಮ ಕುತ್ತಿಗೆ ಕುಯ್ಯೋದಲ್ಲದೇ, ನಿಮ್ಮನ್ನೆಲ್ಲ ಬೀದಿಗೆ ತಂದು ನಿಲ್ಲಿಸಿದ್ದಾರೆ. ಸಮಾಜ ಒಡೆದು ನೆಮ್ಮದಿಯ ವಾತಾವರಣ ಹಾಳು ಮಾಡಿ, ಅದರ ಮೇಲೆ ಅಧಿಕಾರ ಹಿಡೀತೀನಿ ಅಂತಾ ಹೊರಟರೆ ಯುವಕರು ಅದಕ್ಕೆ ಅವಕಾಶ ಕೊಡಬೇಡಿ. ಜಾತ್ರೆಗಳಲ್ಲೂ ಧರ್ಮ ಬೆರೆಸಿದ್ದಾರೆ. ಇವರನ್ನೆಲ್ಲ ಎಲ್ಲಿಗೆ ಕಳಿಸ್ತೀರಿ.? ಎಂದು ಹೆಚ್ಡಿಕೆ ಪ್ರಶ್ನಿಸಿದರು.