ರಾಣೆಬೆನ್ನೂರು: ನಗರಸಭಾ ಪೌರಕಾರ್ಮಿಕರ ವಸತಿಗಾಗಿ ನಿರ್ಮಿಸಿದ ಮನೆಗಳು ಉದ್ಘಾಟನೆಯಾಗದೆ ಬಾಗಿಲಿಗೆ ಬೀಗ ಹಾಕಲಾಗಿದೆ.
ಹೌದು, ಕರ್ನಾಟಕ ಗೃಹ ಮಂಡಳಿ ಸಹಾಯಧನದ ಅಡಿಯಲ್ಲಿ ಇಲ್ಲಿನ ಜೆ.ಹೆಚ್.ಪಟೇಲ್ ನಗರದಲ್ಲಿ ಜಿ-1 ಮಾದರಿಯಲ್ಲಿ ಸುಮಾರು 30 ಮನೆಗಳನ್ನು ಕಟ್ಟಲಾಗಿದೆ. ಪ್ರತಿ ಮನೆಗೆ ಸುಮಾರು 18 ಲಕ್ಷದಂತೆ ಸುಮಾರು 2 ಕೋಟಿ 70 ಲಕ್ಷ ವ್ಯಯಿಸಲಾಗಿದೆ. ಆದರೆ ಈಗಾಗಲೇ ಮನೆಗಳ ಕಾಮಗಾರಿ ಸಂಪೂರ್ಣ ಮುಗಿದಿದ್ದು, ಇನ್ನೂ ಉದ್ಘಾಟನೆಯಾಗಿಲ್ಲ. ಸರ್ಕಾರ ದಿನನಿತ್ಯ ನಗರ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರಕಾರ್ಮಿಕರ ಕುಟುಂಬಗಳಿಗೆ ವಸತಿ ನಿರ್ಮಿಸಿಕೊಟ್ಟಿದೆ. ಆದರೆ ಈವರೆಗೂ ಪೌರಕಾರ್ಮಿಕರಿಗೆ ಮನೆಗಳನ್ನು ಹಸ್ತಾಂತರ ಮಾಡಲು ನಗರಸಭೆ ಆಗಲಿ ಅಥವಾ ಗೃಹ ಮಂಡಳಿಯಾಗಲಿ ಮುಂದಾಗಿಲ್ಲ ಎಂಬುದು ಬೇಸರದ ಸಂಗತಿ ಎಂದು ಪೌರಕಾರ್ಮಿಕರು ಹೇಳಿದ್ದಾರೆ.
ಅನೈತಿಕ ತಾಣವಾದ ಆವರಣ:
ಸದ್ಯ ಮನೆಗಳ ಕಾಮಗಾರಿ ಮುಗಿದಿದ್ದು, ಎಲ್ಲಾ ಮನೆಗಳಿಗೆ ಬೀಗ ಹಾಕಲಾಗಿದೆ. ಅಲ್ಲದೆ ನಗರ ಬಿಟ್ಟು ದೂರು ಇರುವ ಕಾರಣ ಇಲ್ಲಿ ರಾತ್ರಿ ಕುಡುಕರ ಹಾವಳಿ ಹೆಚ್ಚಾಗಿದ್ದು, ಕೆಲ ಮನೆಗಳ ಕಿಟಕಿ ಗಾಜು ಒಡೆದಿವೆ. ಆದ್ದರಿಂದ ಅಧಿಕಾರಿಗಳು ಬೇಗನೆ ಉದ್ಘಾಟನೆ ಮಾಡಿ ಮನೆಗಳನ್ನು ಹಂಚಿಕೆ ಮಾಡಬೇಕಾಗಿದೆ.