ಹಾವೇರಿ: ರಾಜ್ಯದಲ್ಲಿ ವರುಣನ ಅಬ್ಬರ ಜೋರಾಗಿದ್ದು, ಜಿಲ್ಲೆಯಲ್ಲಿಯೂ ಧಾರಾಕಾರ ಮಳೆಯಾಗುತ್ತಿದೆ. ಶುಕ್ರವಾರದಂದು ವ್ಯಾಪಕ ಮಳೆಯಾಗಿದೆ. ಜಿಲ್ಲೆಯ ಹಾನಗಲ್ ತಾಲೂಕಿನ ಹಿರೇಕಣಗಿ, ಹಿರೇಹುಲ್ಲಾಳ, ಹೆರೂರು, ಹಾವೇರಿ ತಾಲೂಕಿನ ಕೊರಡೂರು ರಾಣೆಬೆನ್ನೂರು ತಾಲೂಕಿನ ಲಿಂಗದಹಳ್ಳಿ, ಕುಪ್ಪೇಲೂರು, ಮುಷ್ಟೂರು ನಂದಿಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ಕೆರೆ ಕಟ್ಟೆಗಳು ತುಂಬಿದ್ದು ಹೊಲಗಳಿಗೆ ನೀರು ನುಗ್ಗಿದೆ.
ರಸ್ತೆ ಸಂಪರ್ಕ ಕಡಿತ:
ಹಾನಗಲ್ ತಾಲೂಕಿನ ಅಕ್ಕಿವಳ್ಳಿ ಮತ್ತು ಹಾನಗಲ್ ಅರಳೇಶ್ವರ ಕಾಡಶೆಟ್ಟಿಹಳ್ಳಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಟ್ಟಿಹಳ್ಳಿ ತಾಲೂಕಿನ ಎಲಿವಾಳ ಸೇತುವೆ, ಬಡಸಂಗಾಪುರ, ಕುಡಪಲಿ ಬ್ರಿಡ್ಜ್ ಕಂ ಬ್ಯಾರೇಜ್ ಮುಳುಗಡೆಯಾಗಿದೆ. ಹಿರೇಕೆರೂರು ತಾಲೂಕಿನ ನಿಡನೇಗಿಲು ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ನೀರು ನುಗ್ಗಿದೆ.
84 ಮನೆಗಳಿಗೆ ಭಾಗಶಃ ಹಾನಿ:
ಜಿಲ್ಲೆಯಾದ್ಯಂತ ಸುಮಾರು 84 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ನಿರಂತರ ಮಳೆಯಿಂದ ಹಾನಗಲ್ ತಾಲೂಕಿನಲ್ಲಿ ಧರ್ಮಾ ನದಿ ಉಕ್ಕಿ ಹರಿಯುತ್ತಿದೆ. ಈ ಮಧ್ಯೆ ಹಿರೂರು ಗ್ರಾಮದಲ್ಲಿ ಜಮೀನಿನಲ್ಲಿದ್ದ ಕೊಟ್ಟಿಗೆಯಲ್ಲಿ ಆಕಳು ಮತ್ತು ಕರು ಮಳೆನೀರಿನಲ್ಲಿ ಸಿಲುಕಿದ್ದವು. ವಿಷಯ ಅರಿತ ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್ ಮೂಲಕ ತೆರಳಿ ಆಕಳು ಮತ್ತು ಕರುವಿನ ರಕ್ಷಣೆ ಮಾಡಿದ್ದಾರೆ. ಸಿರಾಜ್ ಕಲಕೋಟಿ ಎಂಬುವರಿಗೆ ಸೇರಿದ ಆಕಳು ಮತ್ತು ಕರುವನ್ನು ರಕ್ಷಣೆ ಮಾಡಲಾಗಿದೆ.
ಇದನ್ನೂ ಓದಿ: ಹಿಂದೆಂದೂ ಕಂಡರಿಯದ ಮಳೆ: ಮೈದುಂಬಿದ ಹೇಮಾವತಿ.. ಹಾಸನ ಜಿಲ್ಲೆಯಲ್ಲಿ ರೆಡ್ ಅಲರ್ಟ್!
ಮತ್ತೊಂದೆಡೆ ಎರಡು ಗ್ರಾಮಗಳಿಗೆ ವಿದ್ಯುತ್ ಕಡಿತಗೊಳ್ಳದಂತೆ ನೋಡಿಕೊಳ್ಳಲು ಲೈನ್ಮ್ಯಾನ್ ನೀರಿನಲ್ಲಿ ಈಜಿಕೊಂಡು ಹೋಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಘಟನೆ ಹಿರೇಕೆರೂರು ತಾಲೂಕಿನ ಚಿಕ್ಕೋಣತಿ ಗ್ರಾಮದಲ್ಲಿ ನಡೆದಿದೆ. ಚಿಕ್ಕೋಣತಿ ಗ್ರಾಮದಲ್ಲಿರುವ ಟ್ರಾನ್ಸ್ಫಾರ್ಮರ್ ನೀರಿನಲ್ಲಿ ಇದ್ದಿದ್ದರೆ ಸಾತೇನಹಳ್ಳಿ ಮತ್ತು ಮಡ್ಲೂರು ಗ್ರಾಮಸ್ಥರು ನೀರು ಇಳಿಯುವವರೆಗೆ ವಿದ್ಯುತ್ಗಾಗಿ ಕಾಯಬೇಕಾಗಿತ್ತು. ಇದನ್ನರಿತ ಲೈನ್ಮ್ಯಾನ್ ಮುಖೇಶ ಪಾಟೀಲ್ ನೀರಿನಲ್ಲಿ ಈಜಿಕೊಂಡು ಹೋಗಿ ಉಭಯ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಾಗುವಂತೆ ಮಾಡಿದ್ದಾರೆ. ಅವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.