ಹಾವೇರಿ: ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿದ್ದ ಮಳೆ ಕಡಿಮೆಯಾಗಿದೆ. ಆದರೆ ವರದಾ, ಧರ್ಮಾ, ಕುಮದ್ವತಿ ಮತ್ತು ತುಂಗಭದ್ರಾ ನದಿಗಳ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದು, ಅಪಾಯಮಟ್ಟ ಮೀರಿ ಹರಿಯುತ್ತಿವೆ. ಇದರಿಂದಾಗಿ ಜಿಲ್ಲೆಯಲ್ಲಿ 10 ಕ್ಕೂ ಅಧಿಕ ರಸ್ತೆಗಳು ಜಲಾವೃತಗೊಂಡಿದ್ದು ಸಂಚಾರ ಸ್ಥಗಿತವಾಗಿದೆ.
ಜಿಲ್ಲೆಯಲ್ಲಿ ಸುರಿದ ಮಳೆಯಿಂದ 443 ಮನೆಗಳಿಗೆ ಬಾಗಶಃ ಹಾನಿಯಾಗಿದ್ದು, 34 ಮನೆಗಳು ಸಂಪೂರ್ಣ ಧರೆಗುರುಳಿವೆ. ರಾಣೆಬೆನ್ನೂರು ತಾಲೂಕಿನಲ್ಲಿ 14, ಬ್ಯಾಡಗಿ ತಾಲೂಕಿನಲ್ಲಿ 38, ಹಿರೇಕೆರೂರು ತಾಲೂಕಿನಲ್ಲಿ 15, ರಟ್ಟಿಹಳ್ಳಿ ತಾಲೂಕಿನಲ್ಲಿ 87 ಮನೆಗಳು, ಸವಣೂರು ತಾಲೂಕಿನಲ್ಲಿ 14, ಶಿಗ್ಗಾವಿ ತಾಲೂಕಿನಲ್ಲಿ 108 ಮನೆಗಳು ಮತ್ತು ಹಾನಗಲ್ ತಾಲೂಕಿನಲ್ಲಿ 108 ಮನೆಗಳಿಗೆ ಬಾಗಶಃ ಹಾನಿಯಾಗಿದೆ.
ಜಿಲ್ಲೆಯಲ್ಲಿ ಬ್ಯಾಡಗಿ ತಾಲೂಕಿನಲ್ಲಿ 22, ರಟ್ಟಿಹಳ್ಳಿ ತಾಲೂಕಿನಲ್ಲಿ 6, ಹಾನಗಲ್ ತಾಲೂಕಿನಲ್ಲಿ 6 ಮನೆಗಳು ಸಂಪೂರ್ಣ ಧರೆಗುರುಳಿವೆ. ಕುಮದ್ವತಿ ನದಿ ರಟ್ಟಿಹಳ್ಳಿ ತಾಲೂಕಾ ಕೇಂದ್ರದಲ್ಲಿ 20 ಕ್ಕೂ ಅಧಿಕ ಮನೆಗಳಿಗೆ ನುಗ್ಗಿದೆ. ಕುಮದ್ವತಿಯಿಂದ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದ್ದು, ಮನೆಯಲ್ಲಿದ್ದ ದವಸಧಾನ್ಯಗಳು ಹಾಳಾಗಿವೆ.
ಪ್ರತಿವರ್ಷ ಪ್ರವಾಹ ಅಲ್ಲಿ ಬಂತು ಇಲ್ಲಿಗೆ ಬಂತು ಅಂತಾ ಕೇಳಿದ್ವಿ. ಆದರೆ ಈ ವರ್ಷ ಕುಮದ್ವತಿ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಕಳೆದ ಹಲವು ವರ್ಷಗಳಲ್ಲಿ ಇದೇ ಪ್ರಥಮ ಬಾರಿಗೆ ಪ್ರವಾಹ ಸ್ಥಿತಿ ನಮಗೆ ಎದುರಾಗಿದೆ. ಸರ್ಕಾರ ನಮ್ಮ ನೆರವಿಗೆ ಧಾವಿಸಿ ತಾತ್ಕಾಲಿಕ ಶೆಡ್‌ಗಳನ್ನ ನಿರ್ಮಿಸಿಕೊಡಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.