ಹಾವೇರಿ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಅಯೋಧ್ಯೆ ರಾಮಮಂದಿರದೊಳಗೆ ವಿವಿಧ ಮೂರ್ತಿಗಳ ಕೆತ್ತನೆ ಭರದಿಂದ ಸಾಗಿದ್ದು, ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಇದೇ 22 ರಂದು ಅಯೋಧ್ಯೆಯ ರಾಮಮಂದಿರದ ರಾಮಲಲ್ಲಾಗೆ ಪ್ರಾಣ ಪ್ರತಿಷ್ಠಾಪನೆ ಮಾಡುವ ಮೂಲಕ ರಾಮಮಂದಿರ ವಿದ್ಯುಕ್ತವಾಗಿ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಈ ಐತಿಹಾಸಿಕ ಕ್ಷಣಕ್ಕೆ ದೇಶವಷ್ಟೇ ಅಲ್ಲದೆ ವಿಶ್ವವೇ ಎದುರು ನೋಡುತ್ತಿದೆ.
ಇಂತಹ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ರಾಮಮಂದಿರದ ನಿರ್ಮಾಣದಲ್ಲಿ ಸಾವಿರಾರು ಶಿಲ್ಪಕಲಾವಿದರು ಪಾಲ್ಗೊಂಡಿದ್ದಾರೆ. ಅಂತವರಲ್ಲಿ ಒಬ್ಬರು ಹಾನಗಲ್ ತಾಲೂಕಿನ ಹಿರೇಕೌಂಶಿ ಗ್ರಾಮದ ಯುವಕ ಮೌನೇಶ ಬಡಿಗೇರ. ಈ ಐತಿಹಾಸ ಕ್ಷಣಕ್ಕೆ ಸಾಕ್ಷಿಯಾಗಲಿರುವ ರಾಮಮಂದಿರದ ರಾಮಲಲ್ಲಾ ಮೂರ್ತಿ ಕೆತ್ತನೆಯಲ್ಲಿ ತನಗೆ ಅವಕಾಶ ಸಿಕ್ಕಿದ್ದು, ಪೂರ್ವಜನ್ಮದ ಪುಣ್ಯ, ನನ್ನ ಪೂರ್ವಜರ ಪೂಜೆಯ ಫಲ ಎಂದು ಮೌನೇಶ ಹೇಳಿದ್ದಾರೆ.
ಮೌನೇಶ್ಗೆ ಖ್ಯಾತ ಶಿಲ್ಪಿಗಳ ತರಬೇತಿ: ಮೌನೇಶ ಅವರಿಗೆ ಬಾಲ್ಯದಿಂದಲೂ ಗಣೇಶ ಸೇರಿದಂತೆ ವಿವಿಧ ಮೂರ್ತಿಗಳ ಕೆತ್ತನೆಯಲ್ಲಿ ಆಸಕ್ತಿ. ಈ ಅಸಕ್ತಿಯಿಂದಾಗಿ ಕೇವಲ 9ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ ಅವರಿಗೆ ತಂದೆ ಕರಿಬಸಪ್ಪ ಎರಡು ವರ್ಷದ ಶಿಲ್ಪಕಲೆ ತರಬೇತಿ ವ್ಯವಸ್ಥೆ ಮಾಡಿದ್ದರು. ತರಬೇತಿ ಪಡೆದ ಮೌನೇಶ ಮತ್ತು ಹಿಂತಿರುಗಿ ನೋಡಿಲ್ಲಾ. ಹಲವು ಖ್ಯಾತ ಶಿಲ್ಪಿಗಳ ಕೈಕೆಳಗೆ ಕೆಲಸ ಮಾಡಿದ ಈತ ಶಿಲ್ಪಕಲೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು. ಖ್ಯಾತ ಶಿಲ್ಪಕಲಾಕಾರ ವಿಪೀನ್ ಭದೌರಿಯಾ ನೇತೃತ್ವದ ತಂಡದಲ್ಲಿ ಸ್ಥಾನ ಪಡೆದು ಬಡಿಗೇರ್ ಮೂರ್ತಿ ಕೆತ್ತನೆಗೆ ಆಯ್ಕೆಯಾದರು. ಈ ವಿಷಯ ಮನೆಯಲ್ಲಿ ಹೇಳುತ್ತಿದ್ದಂತೆ ತಂದೆ ಕರಿಸಬಸಪ್ಪ ಮತ್ತು ತಾಯಿಗೆ ಇನ್ನಿಲ್ಲದ ಸಂತಸ ತಂದಿತ್ತು. ಆಯ್ಕೆಯಾದ ನಂತರ ಹಿರೇಕೌಂಶಿಯಲ್ಲಿ ವಾರದವರೆಗೆ ವಾಸಿಸಿದ್ದ ಮೌನೇಶ ನಂತರ ಪಯಣ ಬೆಳೆಸಿದ್ದು ಅಯೋಧ್ಯೆಯತ್ತ.
ಅಯೋಧ್ಯೆಯಲ್ಲಿ 7 ತಿಂಗಳು ಕಾರ್ಯ; ಅಯೋಧ್ಯೆಯಲ್ಲಿ ಸತತ 7 ತಿಂಗಳ ಕಾಲ ಇದ್ದು, ಆರು ಸದಸ್ಯರ ತಂಡದಲ್ಲಿ ರಾಮಲಲ್ಲಾನ ಶಿಲ್ಪಕೆತ್ತನೆಯಲ್ಲಿ ತೊಡಗಿಕೊಂಡಿದ್ದ. ಮೈಸೂರಿನ ಎಚ್ ಡಿ ಕೋಟೆಯ ಮೂಲದ ಕೃಷ್ಣಶಿಲೆಯಲ್ಲಿ ರಾಮಲಲ್ಲಾ ಮೂರ್ತಿ ಕೆತ್ತನೆಯಲ್ಲಿ ಪಾಲ್ಗೊಂಡಿದ್ದರು. ಈ ಅವಕಾಶವನ್ನು ನಾನು ಕನಸಲ್ಲೂ ಸಹ ಊಹೆ ಮಾಡಿರಲಿಲ್ಲಾ. ನಮ್ಮ ಗುರುಗಳಿಂದ ಈ ದೊಡ್ಡ ಅವಕಾಶ ನನಗೆ ಸಿಕ್ಕಿದ್ದು, ಇದೊಂದು ಮರೆಯಲಾರದ ಅದ್ಬುತ ಅನುಭವ ಎನ್ನುತ್ತಾರೆ ಮೌನೇಶ ಬಡಿಗೇರ್.
ಕಳೆದ 10 ವರ್ಷಗಳಿಂದ ಮೌನೇಶ್ ಮೂರ್ತಿಶಿಲ್ಪ ಕಾರ್ಯದಲ್ಲಿ ನಿರತರಾಗಿದ್ದಾರೆ. ಸದ್ಯ ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ದೇವರ ಮೂರ್ತಿ ಕೆತ್ತನೆ ಕಾರ್ಯ ಮಾಡುತ್ತಿದ್ದಾರೆ. '7 ತಿಂಗಳು ಕಾಲ ತಪಸ್ಸಿನಂತೆ ರಾಮಲಲ್ಲಾ ಮೂರ್ತಿ ಕೆತ್ತನೆಯಲ್ಲಿ ಪಾಲ್ಗೊಂಡಿದ್ದೆ. ಅಲ್ಲಿ ನಾವೆಲ್ಲ ಕಲಾವಿದರು ಕಲಾಕೃತಿ ಕೆತ್ತನೆ ಬಗ್ಗೆ ಮಾತನಾಡುತ್ತಿರಲಿಲ್ಲಾ. ಈ ರೀತಿ ಚರ್ಚೆ ರಾಮಲಲ್ಲಾ ಮೂರ್ತಿ ಕೆತ್ತನೆಯ ಮೇಲೆ ಪರಿಣಾಮ ಬೀರಬಾರದು ಎಂದು ಈ ನಿಯಮ ಹಾಕಿಕೊಂಡಿದ್ದೆವು ಎಂದು ಅನುಭವವನ್ನು ಹಂಚಿಕೊಂಡಿದ್ದಾರೆ.
ರಾಮಮಂದಿರ ಟ್ರಸ್ಟ್ನಿಂದ ಗೌರವ; ಈ ಅಭೂತಪೂರ್ವ ಕೆಲಸದಲ್ಲಿ ಪಾಲ್ಗೊಂಡಿದ್ದ ಮೌನೇಶ ಅವರಿಗೆ ರಾಮಮಂದಿರ ಟ್ರಸ್ಟ್ನವರು ಬಾಲ ರಾಮನ ಮೂರ್ತಿ ನೀಡಿ ಗೌರವಿಸಿದ್ದಾರೆ. 9ನೇ ತರಗತಿ ಓದಿದ್ದ ನನಗೆ ಹಿಂದಿ ಭಾಷೆ ಬರುತ್ತಿರಲಿಲ್ಲಾ. ನಂತರ ಅಲ್ಲಿ ಹಿಂದಿ ಭಾಷೆ ಕಲಿತಿದ್ದೇನೆ. ಅಲ್ಲಿಯ ವಾತಾವರಣಕ್ಕೆ ಆರಂಭದಲ್ಲಿ ಹೊಂದಿಕೊಳ್ಳಲು ಸ್ವಲ್ಪ ಕಷ್ಟವಾಯಿತು. ನಂತರ ಹವಾಮಾನಕ್ಕೆ ಹೊಂದಿಕೊಂಡು ಕೆಲಸ ಮಾಡಲಾರಂಭಿಸಿದ ನಂತರ ಕೆಲಸ ಸಾಗಿದ್ದೇ ಗೊತ್ತಾಗಲಿಲ್ಲಾ. ಏಳು ತಿಂಗಳು ಕಾಲ ಹೇಗೆ ಕಳೆಯಿತು ಎನ್ನುವುದು ತಿಳಿಯಲಿಲ್ಲ. ಇಂತಹ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ನನ್ನ ಸೌಭಾಗ್ಯ ಎಂದು ಮೌನೇಶ್ ಸಂತಸ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: 'ಬಂಗಾರದ ರಾಮಮಂದಿರ': 42 ದ್ವಾರಗಳಿಗೆ ಚಿನ್ನಲೇಪನ, 100 ಕೆಜಿ ಬಂಗಾರ ಬಳಕೆ