ಹಾವೇರಿ : ಉದ್ಘಾಟನೆಯಾಗಿ ವರ್ಷ ಕಳೆದರೂ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳ ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
2010ರಲ್ಲಿ ಬಿ.ಎಸ್.ಯಡಿಯೂರಪ್ಪನವರು ಸಿಎಂ ಆಗಿದ್ದ ಸಮಯದಲ್ಲಿ ಜಿಲ್ಲೆಯಲ್ಲಿ ಸರ್ಕಾರಿ ಈಜುಕೊಳವನ್ನು ಉದ್ಘಾಟಿಸಿದ್ದರು. ಆದರೆ, ಸ್ವಿಮಿಂಗ್ ಪೂಲ್ ಅನೇಕ ಸಮಸ್ಯೆಗಳಿಂದ ಕೂಡಿತ್ತು. ಹಾಗಾಗಿ, ಜಿಲ್ಲಾಡಳಿತ ಈಜುಕೊಳದ ದುರಸ್ತಿಗೆ ಮುಂದಾಗಿತ್ತು.
ನಂತರ ಯುವಜನ ಮತ್ತು ಕ್ರೀಡಾ ಇಲಾಖೆ ಸುಪರ್ಧಿಯಲ್ಲಿ ಈಜುಕೊಳ ಕೆಲಕಾಲ ಚೆನ್ನಾಗಿ ನಡೆದಿದ್ದು ಬಿಟ್ಟರೆ ನಂತರ ಸ್ವಿಮ್ಮಿಂಗ್ ಪೂಲ್, ಸಾರ್ವಜನಿಕರಿಗೆ ತೆರೆದಿದ್ದೆ ಕಡಿಮೆ. ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಈಜುಕೊಳವನ್ನು ಖಾಸಗಿಯವರಿಗೆ ನೀಡಲಾಗಿತ್ತು.
ಕೊರೊನಾ ಮೊದಲನೆ ಅಲೆ ವೇಳೆ ಈಜುಕೊಳವನ್ನು ಬಂದ್ ಮಾಡಲಾಗಿತ್ತು. ನಂತರ ಸರ್ಕಾರ ಅನುಮತಿ ನೀಡಿದರೂ ಮತ್ತೆ ದುರಸ್ತಿ ಮಾಡಿ ಆರಂಭಿಸುವ ಹೊತ್ತಿಗೆ ಕೊರೊನಾ ಎರಡನೇ ಅಲೆಯಿಂದ ಈಜುಕೊಳ ಮತ್ತೆ ಬಂದ್ ಆಯಿತು.
ಎರಡನೇ ಅಲೆ ಕಡಿಮೆಯಾಗುತ್ತಿದ್ದಂತೆ ಖಾಸಗಿ ಈಜುಕೊಳಕ್ಕೆ ಅನುಮತಿ ಸಿಕ್ಕರೂ ಸಹ ಜಿಲ್ಲೆಯಲ್ಲಿರುವ ಮೂರು ಸರ್ಕಾರಿ ಈಜುಕೊಳಗಳಿಗೆ ಮಾತ್ರ ಅನುಮತಿ ಸಿಗಲಿಲ್ಲ. ಪರಿಣಾಮ ರಾಣೇಬೆನ್ನೂರು, ಹಾನಗಲ್ ಮತ್ತು ಜಿಲ್ಲೆಯ ಸ್ವಿಮ್ಮಿಂಗ್ ಪೂಲ್ಗಳು ಆರಂಭವಾಗಲೇ ಇಲ್ಲ.
ಹಾಳಾದ ಉಪಕರಣಗಳು :
ಜಿಲ್ಲೆಯಲ್ಲಿರುವ ಸರ್ಕಾರಿ ಮೂರು ಈಜುಕೊಳಗಳು ಬಂದಾಗಿವೆ. ಬಹಳ ದಿನಗಳಿಂದ ಕಾರ್ಯ ಆರಂಭಿಸಿದ ಕಾರಣ ಉಪಕರಣಗಳು ಹಾಳಾಗಿವೆ. ಈಜುಕೊಳದಲ್ಲಿ ನಿಂತ ನೀರಲ್ಲಿ ಜೊಂಡು ಬಂದಿದ್ದು, ದುರ್ವಾಸನೆ ಬೀರುತ್ತಿದೆ. ಸರ್ಕಾರ ಈಗ ಈ ಈಜುಕೊಳಗಳಿಗೆ ಅನುಮತಿ ನೀಡಿದರೂ ಆರಂಭಿಸಲು ಹಲವು ದಿನಗಳು ಬೇಕೆನ್ನುವ ಸ್ಥಿತಿ ತಲುಪಿದೆ.
ಶೀಘ್ರ ಈಜುಕೊಳ ಆರಂಭಕ್ಕೆ ಮನವಿ:
ಈ ಕುರಿತಂತೆ ಹಲವು ಬಾರಿ ಅಧಿಕಾರಿಗಳಿಗೆ, ಸಚಿವರಿಗೆ ಸಹ ಮನವಿ ಸಲ್ಲಿಸಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಈಜುಕೊಳ ಹಾಳಾಗುತ್ತಿದೆ. ಆದಷ್ಟು ಬೇಗ ಸ್ವಿಮಿಂಗ್ ಪೂಲ್ ಆರಂಭಕ್ಕೆ ಅನುಮತಿ ನೀಡಬೇಕು. ಆ ಮೂಲಕ ಈಜುಪ್ರೀಯರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೊಮ್ಮೆ ನೋಡಿ: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ