ಹಾವೇರಿ : ಇಲ್ಲಿನ ಆಲದಕಟ್ಟಿ ಪಟಾಕಿ ದುರಂತದಲ್ಲಿ ಸಾವನ್ನಪ್ಪಿದ ಮೂವರ ಕುಟುಂಬಸ್ಥರಿಗೆ ಸರ್ಕಾರದ ವತಿಯಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಜೊತೆಗೆ ವೈಯಕ್ತಿಕವಾಗಿ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಿಳಿಸಿದ್ದಾರೆ.
ಹಾವೇರಿ ತಾಲೂಕಿನ ಕಾಟೇನಹಳ್ಳಿ ಗ್ರಾಮದಲ್ಲಿ ಮೃತರ ಕುಟುಂಬಗಳಿಗೆ ಪರಿಹಾರ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ತಿಂಗಳು ನಗರದ ಹೊರವಲಯದಲ್ಲಿ ಪಟಾಕಿ ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದರು. ನಮ್ಮ ಕ್ಷೇತ್ರದ ಮೂವರು ಅವಘಡದಲ್ಲಿ ಸಾವನ್ನಪ್ಪಿದ್ದರು. ಈ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಸರ್ಕಾರದ ವತಿಯಿಂದ ಪರಿಹಾರ ನೀಡುವಂತೆ ಮನವಿ ಮಾಡಿದ್ದೆವು. ಹೀಗಾಗಿ ಸರ್ಕಾರದ ವತಿಯಿಂದ ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಜೊತೆಗೆ ವೈಯಕ್ತಿಕವಾಗಿ ನಾನು ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡುತ್ತೇನೆ ಎಂದು ಭರವಸೆ ನೀಡಿದರು. ಮೃತರ ಕುಟುಂಬಸ್ಥರಿಗೆ ಹೆಚ್ಚಿನ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸುವುದಾಗಿ ತಿಳಿಸಿದರು.
ಪಟಾಕಿ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಸ್ಥರ ದುಃಖವನ್ನು ಭರಿಸಲು ಸಾಧ್ಯವಿಲ್ಲ. ಮನೆಯ ಅಧಾರಸ್ತಂಭ ಕಳೆದುಕೊಂಡ ಕುಟುಂಬಗಳಿಗೆ ಸ್ವಲ್ಪಮಟ್ಟಿನ ಸಹಾಯವಾಗಲಿ ಎಂದು ಪರಿಹಾರ ನೀಡಿದ್ದೇವೆ ಎಂದು ರುದ್ರಪ್ಪ ಲಮಾಣಿ ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ, ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಆಲದಕಟ್ಟಿ ಪಟಾಕಿ ದುರಂತ..ನಾಲ್ವರು ಸಾವು : ಆಗಸ್ಟ್ 29 ರಂದು ಹಾವೇರಿ ಸಮೀಪದ ಆಲದಕಟ್ಟಿ ಗ್ರಾಮದ ಹೊರವಲಯದಲ್ಲಿರುವ ಭೂಮಿಕಾ ಪಟಾಕಿ ಅಂಗಡಿಗೆ ಬೆಂಕಿ ತಗುಲಿತ್ತು. ಈ ವೇಳೆ ಪಕ್ಕದಲ್ಲಿದ್ದ ಪಟಾಕಿ ಗೋದಾಮಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿ ಉಂಟಾಗಿತ್ತು. ಈ ಸಂದರ್ಭ ಅಲ್ಲಿಯೇ ಕೆಲಸ ಮಾಡುತ್ತಿದ್ದ ಜಯಣ್ಣ, ಕಾಟೇನಹಳ್ಳಿ ಗ್ರಾಮದ ಶಿವಾನಂದ, ದ್ಯಾಮಪ್ಪ ಮತ್ತು ರಮೇಶ್ ಎಂಬವರು ಸಾವನ್ನಪ್ಪಿದ್ದರು.
ಬಳಿಕ ಸಿಎಂ ಸಿದ್ದರಾಮಯ್ಯ ಅವರು ಪಟಾಕಿ ದುರಂತದಲ್ಲಿ ಮಡಿದವರ ಕುಟುಂಬಸ್ಥರಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದರು. ಜೊತೆಗೆ ಬಿಜೆಪಿ ಪಕ್ಷದಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ವಿತರಿಸಿದ್ದರು. ಇಂದು ಸರ್ಕಾರದ ವತಿಯಿಂದ ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ವಿತರಿಸಲಾಗಿದೆ.
ಇದನ್ನೂ ಓದಿ : ಜನತಾ ದರ್ಶನಕ್ಕೆ ಜನಸಾಗರ: ಜಿಲ್ಲಾ ಉಸ್ತುವಾರಿ ಸಚಿವರ ಅನುಪಸ್ಥಿತಿ.. ಸಮಸ್ಯೆ ಆಲಿಸಿದ ಅಧಿಕಾರಿಗಳು, ಶಾಸಕರು