ಹಾವೇರಿ: ತಾಲೂಕಿನ ಮೇಲ್ಮುರಿ ಗ್ರಾಮ ಇದೀಗ ಜಿಲ್ಲೆಯಲ್ಲಿಯೇ ರೇಷ್ಮೆ ಗ್ರಾಮ ಎಂದು ಪ್ರಸಿದ್ಧಿಯಾಗಿದೆ. ಇದಕ್ಕೆ ಕಾರಣ ಇಲ್ಲಿಯ ರೈತರು ರೇಷ್ಮೆ ಬೆಳೆಯತ್ತ ಮುಖಮಾಡಿರುವುದು. 350 ಕ್ಕೂ ಅಧಿಕ ಮನೆಗಳಿರುವ ಗ್ರಾಮದಲ್ಲಿ ರೇಷ್ಮೆ ಮನೆಗಳ ಸಂಖ್ಯೆಯೇ 250 ದಾಟಿದೆ. ಆರಂಭದಲ್ಲಿ ಶೇಂಗಾ, ಗೋವಿನ ಜೋಳ ಮತ್ತು ಹತ್ತಿ ಬೆಳೆಯುತ್ತಿದ್ದ ರೈತರು ಈಗ ರೇಷ್ಮೆಯತ್ತ ಮುಖಮಾಡುತ್ತಿದ್ದಾರೆ.
2 ಎಕರೆಯಿಂದ ಹಿಡಿದು 16 ಎಕರೆ ವಿಸ್ತೀರ್ಣ ಹೊಂದಿರುವ ಜಮೀನಿನಲ್ಲಿ ರೈತರು ರೇಷ್ಮೆ ಬೆಳೆಯುತ್ತಿದ್ದಾರೆ. ರೇಷ್ಮೆಗೆ ಆರಂಭದಲ್ಲಿ ಕೆಜಿ ರೇಷ್ಮೆ ಗೂಡಿಗೆ 350 ರಿಂದ 400 ರೂ. ಸಿಗುತ್ತಿತ್ತು. ಆದರೆ ಕಳೆದ ತಿಂಗಳಿಂದ ರೇಷ್ಮೆಗೆ 700 ರಿಂದ 800 ರೂ. ಸಿಗುತ್ತಿದೆ. ಹೀಗಾಗಿ ರೇಷ್ಮೆ ಮನೆ ಇರುವ ರೈತರು ಮತ್ತೆ ರೇಷ್ಮೆ ಮನೆ ಕಟ್ಟಿಸುತ್ತಿದ್ದಾರೆ.
ಸಾಂಪ್ರದಾಯಿಕ ಬೆಳೆಗಳನ್ನು ವರ್ಷದಲ್ಲಿ ಒಂದು ಬೆಳೆ ಅಥವಾ ಎರಡು ಬೆಳೆ ತಗೆಯಬಹುದು. ಮಳೆ ಬೆಳೆ ಜತೆಗೆ ಬೆಲೆ ಸಹ ಉತ್ತಮವಾಗಿ ದೊರೆತರೆ ಅಲ್ಪಸ್ವಲ್ಪ ಅದಾಯ ಸಿಗುತ್ತಿತ್ತು. ಅದರಲ್ಲಿ ಅದಾಯಕ್ಕಿಂತ ಹಾನಿ ಪ್ರಮಾಣವೇ ಅಧಿಕವಾಗುತ್ತಿತ್ತು. ಆದರೆ ರೇಷ್ಮೆ ಬೆಳೆ ಈ ರೀತಿಯಲ್ಲ. ಪ್ರತಿ 45 ದಿನಗಳಿಗೊಮ್ಮೆ ರೇಷ್ಮೆ ಬೆಳೆ ತೆಗೆಯಬಹುದು. ಹೀಗಾಗಿ ಗ್ರಾಮದಲ್ಲಿ ಅತ್ಯಧಿಕ ಜನ ರೇಷ್ಮೆ ಸಾಕಾಣಿಕೆಗೆ ಮುಂದಾಗಿದ್ದಾರೆ.
ಊರು ತೊರೆದು ದೂರದ ಬೇರೆ ಬೇರೆ ಸ್ಥಳಗಳಿಗೆ ಕೆಲಸಕ್ಕೆ ತೆರಳಿದ್ದ ಗ್ರಾಮಸ್ಥರು ಮೇಲ್ಮುರಿ ಗ್ರಾಮಕ್ಕೆ ವಾಪಸಾಗುತ್ತಿದ್ದಾರೆ. ಈ ಹಿಂದೆ ಹಾವೇರಿ, ಗದಗ ಮತ್ತು ಧಾರವಾಡ ಜಿಲ್ಲೆಗಳನ್ನ ಅಖಂಡ ಧಾರವಾಡ ಜಿಲ್ಲೆಯಂದು ಕರೆಯಲಾಗುತ್ತಿತ್ತು. ಈ ಮೂರು ಜಿಲ್ಲೆಗಳಲ್ಲಿ ಅತಿ ಹೆಚ್ಚು ರೇಷ್ಮೆಯನ್ನು ಹಾವೇರಿ ತಾಲೂಕಿನಲ್ಲಿ ಬೆಳೆಯಲಾಗುತ್ತಿದೆ. ಹಾವೇರಿ ತಾಲೂಕಿನಲ್ಲಿ ಅತಿಹೆಚ್ಚು ರೇಷ್ಮೆ ಬೆಳೆಯುವ ಗ್ರಾಮ ಮೇಲ್ಮುರಿಯಾಗಿದೆ ಎಂದು ರೈತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಮದಲ್ಲಿ ಮೊದ ಮೊದಲು ಬೆರಳೆಣಿಕೆಯಷ್ಟು ಜನ ರೇಷ್ಮೆ ಸಾಕಾಣಿಕೆ ಮಾಡುತ್ತಿದ್ದರು. ಆಗ ಅಷ್ಟು ತಂತ್ರಜ್ಞಾನ ಇರಲಿಲ್ಲ. ಈಗ ತಂತ್ರಜ್ಞಾನ ಸಹ ಸುಧಾರಿಸಿದೆ. ಸರ್ಕಾರ ಸಹ ಹಲವು ರಿಯಾಯಿತಿಗಳನ್ನು ನೀಡುತ್ತಿದೆ. ಜತೆಗೆ ರೇಷ್ಮೆ ಬೆಳೆಗಾರರು ಮನೆ ಕಟ್ಟಿಸಿಕೊಳ್ಳಲು ಸರ್ಕಾರವೇ ಸಬ್ಸಿಡಿ ನೀಡುತ್ತಿದೆ.
ಮೇಲ್ಮುರಿ ಗ್ರಾಮದಲ್ಲಿ ಸುಮಾರು 1200 ಎಕರೆಯಲ್ಲಿ ರೇಷ್ಮೆ ಬೆಳೆಯಲಾಗುತ್ತಿದೆ. ರಾಮನಗರ, ರಾಯಾಪುರ ಮತ್ತು ಸ್ಥಳೀಯ ವರ್ತಕರು ರೇಷ್ಮೆ ಖರೀದಿಸುತ್ತಿದ್ದಾರೆ. ಹೀಗಾಗಿ ಉತ್ತಮ ದರ ಸಹ ಸಿಗುತ್ತಿದ್ದು, ರೇಷ್ಮೆ ಬೆಳೆಗಾರರು ಕೈ ತುಂಬಾ ಅದಾಯಗಳಿಸುತ್ತಿದ್ದಾರೆ. ಇದರ ಜತೆಗೆ ಕೂಲಿ ಕಾರ್ಮಿಕರಿಗೆ ಕೆಲಸ ಸಹ ಸಿಗುತ್ತಿದೆ. ಸಾಂಪ್ರದಾಯಿಕ ಬೆಳೆಗಳನ್ನು ಕೈಬಿಟ್ಟ ರೈತರು ರೇಷ್ಮೆ ಬೆಳೆಯುವ ಮೂಲಕ ಇದೀಗ ನೆಮ್ಮದಿಯ ಜತೆಗೆ ಅಧಿಕ ಅದಾಯ ಸಹ ಗಳಿಸುತ್ತಿದ್ದಾರೆ.
ಇದನ್ನೂ ಓದಿ: ಎಟಿಎಂ ಕಾರ್ಡ್ ಕಸಿದು ಹಣ ದೋಚಿ ಹತ್ಯೆ ಮಾಡಿದ್ದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್