ಹಾವೇರಿ: ಕೊರೊನಾ ಬಂದ ಮೇಲೆ ಅಣಬೆಗೆ ಡಿಮ್ಯಾಂಡ್ ಹೆಚ್ಚಾಗಿದ್ದು, ಇಂತಹ ಅಣಬೆ ಬೆಳೆಯುವ ಮೂಲಕ ತಿಂಗಳಿಗೆ ಸಾವಿರಾರು ರೂಪಾಯಿ ಆದಾಯಗಳಿಸುತ್ತಿದ್ದಾರೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಸಿದ್ದಾಪುರದ ರೈತ ಮಲ್ಲಿಕಾರ್ಜುನ್. ರಾಸಾಯನಿಕ ಬೇಸಾಯದಿಂದ ಬೇಸತ್ತು ಸಾವಯುವ ಕೃಷಿಗೆ ಮರಳಿರುವ ಮಲ್ಲಿಕಾರ್ಜುನ್ ಯಶೋಗಾಥೆ ಹೀಗಿದೆ.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಸಿದ್ದಾಪುರ ಗ್ರಾಮದ ಸಾಮಾನ್ಯ ರೈತ ಮಲ್ಲಿಕಾರ್ಜುನ್ ಕಚವಿ ಕಳೆದ ಹಲವು ವರ್ಷಗಳಿಂದ ರಸಾಯನಿಕ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಈತ ಇದೀಗ ರಾಸಾಯನಿಕ ಕೃಷಿಯಿಂದ ಬೇಸತ್ತು ಸಾವಯುವ ಬೆಳೆಯತ್ತ ಮುಖ ಮಾಡಿದ್ದಾನೆ.
ಅದರಲ್ಲೂ ಜಮೀನು ಇಲ್ಲದೇ ಮನೆಯಲ್ಲಿ ಬೆಳೆಯಬಹುದಾದ ಅಣಬೆಯನ್ನ ಮಲ್ಲಿಕಾರ್ಜುನ ಬೆಳೆಯುತ್ತಿದ್ದಾನೆ. ಆರಂಭದಲ್ಲಿ ಬೇಡಿಕೆ ಇಲ್ಲದಿದ್ದರೂ ಇದೀಗ ಅಣಬೆಗೆ ಸಾಕಷ್ಟು ಬೇಡಿಕೆ ಸಿಕ್ಕಿದೆ. ನಿತ್ಯ 10 ಕೆಜಿಗೂ ಅಧಿಕ ಅಣಬೆ ಬೇಡಿಕೆ ಇದೆ. ಜೊತೆಗೆ ಒಳ್ಳೆಯ ಬೆಲೆ ಸಿಗುತ್ತಿರುವುದರಿಂದ ಮಲ್ಲಿಕಾರ್ಜುನ್ ತಿಂಗಳಿಗೆ ಅಧಿಕ ಆದಾಯಗಳಿಸುತ್ತಿದ್ದಾನೆ.
ಅಣಬೆ 45 ದಿನಗಳಲ್ಲಿ ಇಳುವರಿ ಬರುವಂತಹ ಬೆಳೆ. ಸಾವಯುವ ಕೃಷಿಯಲ್ಲಿ ಬೆಳೆದ ಅಣಬೆಗೆ ಸಾಕಷ್ಟು ಬೇಡಿಕೆ ಇದೆ. ಅದರಲ್ಲೂ ಕೊರೊನಾ ವಿರುದ್ಧ ರೋಗನಿರೋಧಕ ಶಕ್ತಿಯನ್ನ ಹೆಚ್ಚು ಮಾಡುವ ಎಲ್ಲ ಅಂಶಗಳು ಅಣಬೆಯಲ್ಲಿವೆ. ಈಗಾಗಿ ಜನ ಇತ್ತಿಚೀಗೆ ಅಣಬೆ ತಿನ್ನಲು ಮುಂದು ಬರುತ್ತಿದ್ದಾರೆ. ಅಣಬೆಯನ್ನ ಬಹುತೇಕ ಜನ ಮಾಂಸಾಹಾರಿ ಆಹಾರ ಎನ್ನುವ ತಪ್ಪು ಕಲ್ಪನೆ ಸಹ ಕೆಲವರಲ್ಲಿ ಇದೆ. ಇದೆಲ್ಲ ಸುಳ್ಳು ಅಣಬೆ ಸಸ್ಯಹಾರಿ ಬೆಳೆಯಾಗಿದ್ದು ಬಹುತೇಕ ಖನಿಜಾಂಶಗಳು ಇದರಲ್ಲಿರುವುದಾಗಿ ಸಾವಯುವ ತಜ್ಞ ಗಂಗಯ್ಯ ಕುಲಕರ್ಣಿ ತಿಳಿಸಿದ್ದಾರೆ.
ಒಂದು ಕೆಜಿ ಅಣಬೆ ಬೀಜದಿಂದ 10 ಕೆಜಿ ಅಣಬೆ ಬೆಳೆಯಬಹುದು. ಅಣಬೆಗೆ ಪ್ರಸ್ತುತ ಕೆಜಿಗೆ 250 ರೂಪಾಯಿ ದರವಿದ್ದು ದಿನಕ್ಕೆ ಐದರಿಂದ 10 ಕೆಜಿ ಅಣಬೆ ಬೆಳೆಯುತ್ತಿದ್ದಾರೆ ಮಲ್ಲಿಕಾರ್ಜುನ್. ಬಹಳಷ್ಟು ಕೃಷಿಕರು ಸಾಂಪ್ರದಾಯಿಕ ಬೆಳೆ ಬೆಳೆದು ನಷ್ಟ ಅನುಭವಿಸುತ್ತಿದ್ದಾರೆ. ಇಂತಹ ದಿನಗಳಲ್ಲಿ ಮಲ್ಲಿಕಾರ್ಜುನ ಅಣಬೆ ಬೇಸಾಯದ ಮೂಲಕ ಅದಾಯಗಳಿಸುತ್ತಿರುವುದು ಉಳಿದ ರೈತರಿಗೆ ಮಾದರಿಯಾಗಿದೆ.