ಹಾವೇರಿ : ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಜಿಲ್ಲೆಯ ಎಸ್ಎಸ್ಎಲ್ಸಿ ಫಲಿತಾಂಶ ತೃಪ್ತಿಕರವಾಗಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸ್ಥಾನವನ್ನ ಗಣನೀಯವಾಗಿ ಹೆಚ್ಚಿಸಲು ಜಿಲ್ಲಾ ಶಿಕ್ಷಣ ಇಲಾಖೆ ಮುಂದಾಗಿದೆ.
ಇಲಾಖೆಯೇ ಈಗ ವರದಾ ವಾಹಿನಿ ಎಂಬ ಯುಟ್ಯೂಬ್ ಚಾನಲ್ ತೆರೆದಿದೆ. ಇಲ್ಲಿ ನುರಿತ ಶಿಕ್ಷಕರು ಎಸ್ಎಸ್ಎಲ್ಸಿ ಪಠ್ಯಕ್ರಮವನ್ನ ಸರಳವಾಗಿ ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಿದ್ದಾರೆ. ವಿಷಯಕ್ಕನುಗುಣವಾಗಿ ತರಗತಿಗಳನ್ನು ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ತಮಗೆ ಬಿಡುವು ಸಿಕ್ಕಾಗಲೆಲ್ಲ ಪಾಠಗಳನ್ನ ತಿಳಿಯಬಹುದು. ಈ ಚಾನಲ್ನ್ನು ಶಿಕ್ಷಕರು ತಾವೇ ಸ್ವಂತವಾಗಿ ನಿರ್ಮಿಸಿದ್ದು, ಇನ್ನಷ್ಟು ಸುಧಾರಣೆ ತರಲು ಶಿಕ್ಷಣ ಇಲಾಖೆ ಶ್ರಮಿಸುತ್ತಿದೆ.
ಜಿಲ್ಲೆಯಾಗಿ 22 ವರ್ಷಗಳು ಕಳೆದರು ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಹೇಳಿಕೊಳ್ಳುವಂತಹ ಸ್ಥಾನ ಗಳಿಸಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾ ಶಿಕ್ಷಣ ಇಲಾಖೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಇಂತಹ ಕಾರ್ಯಕ್ರಮಗಳಲ್ಲಿ ಯುಟ್ಯೂಬ್ ಚಾನಲ್ ಕೂಡಾ ಒಂದು. ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗಾಗಿ ವರದಾ ವಾಹಿತಿ ಎಂಬ ಯುಟ್ಯೂಬ್ ಚಾನಲ್ ಆರಂಭಿಸಿದೆ. ಇಲ್ಲಿ ನುರಿತ ಶಿಕ್ಷಕರು ಪ್ರಾತ್ಯಕ್ಷತೆಯೊಂದಿಗೆ ಪಾಠಗಳನ್ನು ಮಾಡುತ್ತಾರೆ. ಶಿಕ್ಷಕರು ಮಾಡಿರುವ ಪಾಠಗಳನ್ನು ಎಡಿಟ್ ಮಾಡಲಾಗುತ್ತದೆ. ಅದಕ್ಕೆ ತಕ್ಕಂತೆ ವಿಶ್ಯುವಲ್ ಸಂಯೋಜನೆ ಮಾಡಲಾಗುತ್ತದೆ. ನಂತರ ನುರಿತ ಶಿಕ್ಷಕರು ಪಾಠ ಪ್ರಸಾರಕ್ಕೆ ಅನುಮತಿ ನೀಡಿದ ನಂತರ ಯುಟ್ಯೂಬ್‌ನಲ್ಲಿ ಹಾಕಲಾಗುತ್ತದೆ.
ವರದಾ ವಾಹಿನಿ ಎಸ್ಎಸ್ಎಲ್ಸಿಗೆ ಸಂಬಂಧಿಸಿದಂತೆ 36 ವಿಡಿಯೋ ಪಾಠಗಳನ್ನ ಯುಟ್ಯೂಬ್‌ನಲ್ಲಿ ಈಗಾಗಲೇ ಅಪ್ಲೋಡ್ ಮಾಡಿದೆ. ಈ ಚಾನಲ್ನ ಮತ್ತೊಂದು ವಿಶೇಷ ಅಂದ್ರೆ ಶಿಕ್ಷಣ ಇಲಾಖೆ ಇದಕ್ಕಾಗಿ ಪ್ರತ್ಯೇಕ ಬಂಡವಾಳ ಹಾಕಿಲ್ಲ. ತಮ್ಮ ಇಲಾಖೆಯಲ್ಲಿರುವ ತಂತ್ರಜ್ಞರ ಸಹಾಯದಿಂದ, ನುರಿತ ಶಿಕ್ಷಕರಿಂದ ಈ ರೀತಿಯ ವಿಡಿಯೋ ತುಣಕುಗಳನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಸಿದ್ಧ ಪಡಿಸುತ್ತಿದೆ.
ಓದಿ : ಗುಜರಾತ್ ರಾಜ್ಯದ ಮಾದರಿಯಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ಬೇಕು: ಪ್ರಸ್ತಾವನೆ ಸಲ್ಲಿಸಿದ ಬೊಮ್ಮಾಯಿ
ಇಲಾಖೆಯ ವರದಾ ವಾಹಿನಿಗೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಿನದಿಂದ ದಿನಕ್ಕೆ ವೀಕ್ಷಕರ ಸಂಖ್ಯೆ ಅಧಿಕವಾಗುತ್ತಿದೆ. ಪೋಷಕರು ತಮ್ಮ ಮಕ್ಕಳಿಗೆ ವರದಾ ವಾಹಿನಿಯ ಪಾಠಗಳನ್ನು ವೀಕ್ಷಣೆ ಮಾಡಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯ ಈ ಕಾರ್ಯ ಶಿಕ್ಷಣ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇಲಾಖೆಯ ಈ ಕಾರ್ಯ ಇದೇ ರೀತಿ ಮುಂದುವರೆಯಲಿ. ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲೆಯ ಸ್ಥಾನ ಏರಿಕೆಯಾಗಲಿ ಎಂದು ಶಿಕ್ಷಣ ಪ್ರೇಮಿಗಳು ಹಾರೈಸಿದ್ದಾರೆ.