ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ಡೊಳ್ಳೇಶ್ವರ ಗ್ರಾಮದಲ್ಲಿನ ಪ್ರಮುಖ ರಸ್ತೆಗಳಿಗೆ ಕನ್ನಡ ಕವಿಗಳ ಹೆಸರುಗಳನ್ನಿಡಲಾಗಿದೆ. ಜ್ಞಾನಪೀಠ ಪ್ರಶಸ್ತಿ ವಿಜೇತ 8 ಕವಿಗಳಾದ ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ.ಗೋಕಾಕ್, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರರ ಹೆಸರುಗಳು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ರಾರಾಜಿಸುತ್ತಿವೆ.
ಗ್ರಾಮದ ಸಾಹಿತ್ಯಾಭಿಮಾನಿಗಳು, ಶಿಕ್ಷಕರು ಈ ರೀತಿಯ ಹೆಸರನ್ನು ರಸ್ತೆಗಳಿಗೆ ನಾಮಕರಣ ಮಾಡುವ ಮೂಲಕ ಗ್ರಾಮಸ್ಥರಲ್ಲಿ ಸಾಹಿತ್ಯಾಭಿಮಾನ ಹೆಚ್ಚಿಸಿದ್ದಾರೆ. ಗ್ರಾಮ ಪಂಚಾಯತ್ ಗ್ರಾಮದ ಪ್ರಮುಖ ರಸ್ತೆಗಳಿಗೆ ನಾಮಫಲಕ ಅಳವಡಿಸುವ ಮೂಲಕ ದಿನನಿತ್ಯ ಕವಿಪುಂಗವರ ಹೆಸರುಗಳನ್ನು ಜನರ ಬಾಯಲ್ಲಿ ನುಲಿಯುವಂತೆ ಮಾಡಿದೆ. ಈ ರೀತಿ ಗ್ರಾಮದ ಪ್ರತಿ ರಸ್ತೆಗೆ ಕವಿಗಳ ಹೆಸರು ಇಟ್ಟಿರುವುದರಿಂದ ಇಲ್ಲಿಯ ಮನೆಗಳನ್ನು ಗುರುತಿಸಲು ಕೂಡಾ ಸುಲಭವಾಗಿದೆ.
ಗ್ರಾಮದಲ್ಲಿ ಕಳೆದ 9 ವರ್ಷಗಳಿಂದ ವಿಭಿನ್ನವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದ್ದು, ಅಕ್ಕಿ ಆಲೂರಿನ ಚೆನ್ನವಿರೇಶ್ವರ ಮಠದ ಶಿವಬಸವ ಸ್ವಾಮೀಜಿ ಧ್ವಜಾರೋಹಣ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಎಲ್ಲಾ ಸಮುದಾಯದವರಿದ್ದಾರೆ. ಕನ್ನಡ ರಾಜ್ಯೋತ್ಸವವನ್ನು ಹಬ್ಬದಂತೆ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ರಾಜ್ಯೋತ್ಸವದ ದಿನದಂದು ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿಗಳನ್ನು ಹಾಕಿ ಗ್ರಾಮವನ್ನು ತಳಿರುತೋರಣಗಳಿಂದ ಸಿಂಗರಿಸಲಾಗುತ್ತದೆ.
ಬೇರೆ ಕಡೆ ಕೆಲಸಕ್ಕೆಂದು ಹೋದವರು ನವೆಂಬರ್ 1ರಂದು ಗ್ರಾಮಕ್ಕೆ ಬರುತ್ತಾರೆ. ಅಲ್ಲದೆ ಗ್ರಾಮದಿಂದ ಮದುವೆಯಾಗಿ ಹೋದ ಹೆಣ್ಣು ಮಕ್ಕಳು ಕೂಡಾ ಆಗಮಿಸುತ್ತಾರೆ. ಶಾಲಾ ಮಕ್ಕಳು ಕೈಯಲ್ಲಿ ಕನ್ನಡ ಪುಸ್ತಕಗಳನ್ನು ಹಿಡಿದು ಮೆರವಣಿಗೆ ಮಾಡುತ್ತಾರೆ. ಮಕ್ಕಳಿಗೆ ಕಿತ್ತೂರು ರಾಣೆ ಚೆನ್ನಮ್ಮ, ಒನಕೆ ಓಬವ್ವ ಸೇರಿದಂತೆ ವಿವಿಧ ವೀರಮಹನೀಯರ, ಕವಿಗಳ ವೇಷಭೂಷಣ ಹಾಕಿ ಸಂಭ್ರಮಿಸಲಾಗುತ್ತದೆ. ಹಬ್ಬದ ದಿನಗಳಲ್ಲಿ ಸಿಹಿ ಊಟ ಮಾಡುವಂತೆ ಈ ದಿನ ಗ್ರಾಮಸ್ಥರು ಸಿಹಿ ಅಡುಗೆ ಮಾಡುತ್ತಾರೆ. ರಾಜ್ಯೋತ್ಸವದ ದಿನದಂದು ಗ್ರಾಮ ಸಂಪೂರ್ಣ ಕನ್ನಡಮಯವಾಗಿರುತ್ತದೆ.
ಇದನ್ನೂ ಓದಿ: ಇಸ್ರೋ ಅಧ್ಯಕ್ಷ ಸೋಮನಾಥ್, ನಟರಾದ ಡಿಂಗ್ರಿ ನಾಗರಾಜ್, ಬ್ಯಾಂಕ್ ಜನಾರ್ದನ ಸೇರಿ 68 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ