ಹಾವೇರಿ : ಹಾನಗಲ್ ತಾಲೂಕಿನ ರಾಮತೀರ್ಥ ಹೊಸಕೊಪ್ಪ ಗ್ರಾಮ ವಿಶಿಷ್ಟ ಮದುವೆಗೆ ಸಾಕ್ಷಿಯಾಯಿತು. ಈ ವಿಶಿಷ್ಟ ಮದುವೆಗೆ ಕಾರಣರಾದವರು ಗ್ರಾಮದ ಯುವಕ ಯೋಗಪಟು ಪ್ರದೀಪ್ ಮತ್ತು ವಿಯಟ್ನಾಂ ದೇಶದ ಹೊ ಚಿ ಮಿನ್ ಸಿಟಿಯ ಯುವತಿ ಕುಯಾನ್ ತ್ರಾಂಗ್.
ಪ್ರದೀಪ್ ಖಂಡನ್ನವರ್ ಐಟಿಐ ಮುಗಿಸಿಕೊಂಡು ಗ್ರಾಮದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಆದರೆ, ಅವನಲ್ಲಿದ್ದ ಯೋಗ ಪರಿಣತಿ ವಿಯಟ್ನಾಂ ದೇಶಕ್ಕೆ ತೆರಳುವಂತೆ ಮಾಡಿತ್ತು. 8 ವರ್ಷಗಳ ಹಿಂದೆ ವಿಯಟ್ನಾಂಗೆ ತೆರಳಿದ್ದ ಪ್ರದೀಪ್ಗೆ ಅಲ್ಲಿಯ ಯುವತಿ ಕುಯಾನ್ ತ್ರಾಂಗ್ ಜೊತೆ ಸ್ನೇಹ ಬೆಳೆದಿತ್ತು. ಸ್ನೇಹ ನಂತರ ಪ್ರೀತಿಗೆ ಮರಳಿ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರು ತಮ್ಮ ಪೋಷಕರನ್ನು ಒಪ್ಪಿಸಿ ಮದುವೆಯಾಗಿದ್ದಾರೆ.
ಪ್ರದೀಪ್ ವಿಯಟ್ನಾಂ ದೇಶದಲ್ಲಿ ನಿಶ್ಚಿತಾರ್ಥ ಮುಗಿಸಿಕೊಂಡು ಸ್ವಗ್ರಾಮಕ್ಕೆ ಬಂದು, ಮಂಗಳವಾರ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಮದುವೆಯ ಹಿಂದಿನ ದಿನ ಸೋಮವಾರ ಅರಿಷಿಣ ಶಾಸ್ತ್ರ ಮಾಡಲಾಯಿತು. ಮಂಗಳವಾರ ಮುಂಜಾನೆ ಶುಭ ಮುಹೂರ್ತದಲ್ಲಿ ವಧು-ವರರಿಗೆ ಹಿಂದೂ ಸಂಪ್ರದಾಯದಂತೆ ನಾನಾ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು.
ಮದುಮಗ ಪ್ರದೀಪ್ ಮತ್ತು ಕುಯಾನ್ ತ್ರಾಂಗ್ ಇಬ್ಬರನ್ನು ಹಂದರದಲ್ಲಿ ಕೂರಿಸಿ ಸುರಿಗೆ ನೀರಿನ ಶಾಸ್ತ್ರ ಮಾಡಲಾಯಿತು. ನಂತರ ಸಾಂಪ್ರದಾಯಕ ಉಡುಗೆ ತೊಡಿಸಿ ದೇವಸ್ಥಾನಕ್ಕೆ ಕಳುಹಿಸಲಾಯಿತು. ಶುಭಲಗ್ನದಲ್ಲಿ ಪ್ರದೀಪ್, ಕುಯಾನ್ ತ್ರಾಂಗ್‌ಗೆ ಮಾಂಗಲ್ಯ ಕಟ್ಟುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಹಿಂದೂ ಸಂಪ್ರದಾಯದಂತೆ ಪ್ರದೀಪ್, ಕುಯಾನ್ ತ್ರಾಂಗ್‌ರನ್ನು ವರಿಸಿದ್ದಾರೆ. ಕುಯಾನ್ ತ್ರಾಂಗ್‌ಗೆ ಪ್ರೀತಿ ಎಂದು ಹೆಸರಿಟ್ಟ ಸ್ಥಳೀಯರು ನೂತನ ದಂಪತಿಗೆ ಅಕ್ಷತೆ ಹಾಕಿ ಶುಭಾಶಯ ಕೋರಿದರು. ಪ್ರದೀಪ್ ಜೊತೆ ಸಪ್ತಪದಿ ತುಳಿದ ಪ್ರೀತಿಗೆ, ಪ್ರದೀಪ್ ಅರುಂಧತಿ ನಕ್ಷತ್ರ ತೋರಿಸಿದರು.
ಹೊಸ ಜೋಡಿಯ ಮದುವೆಗೆ ವಿಯಟ್ನಾಂನಲ್ಲಿ ಪ್ರದೀಪ್ ಕೆಲಸ ಮಾಡುವ ರಾಜ್ಯದ ಎಂಟು ಯುವಕರು ಆಗಮಿಸಿ ಶುಭಕೋರಿದರು. ಈ ವಿಶಿಷ್ಟ ಮದುವೆಗೆ ಮಂಗಲವಾದ್ಯಗಳು ಮತ್ತಷ್ಟು ಮೆರುಗು ನೀಡಿದವು. ನಂತರ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಜನರು ಹಾಗೂ ಪ್ರದೀಪ್ ಸಂಬಂಧಿಕರು ನೂತನ ವಧು-ವರರಿಗೆ ಶುಭಾಶಯ ಕೋರಿದರು.
ಇದನ್ನೂ ಓದಿ: ಮಾಡರ್ನ್ ಲುಕ್‍ನಲ್ಲಿ ಪುಷ್ಪ ಚಿತ್ರದ ಹಾಡಿಗೆ ಮಂದಣ್ಣ ಮಸ್ತ್ ಸ್ಟೆಪ್ಸ್.. ವಿಡಿಯೋ