ಹಾವೇರಿ: ಜಿಲ್ಲೆಯಲ್ಲಿ ಕೊರೊನಾ ಪತ್ತೆ ಹಚ್ಚುವ ಲ್ಯಾಬ್ ಇಲ್ಲದಿರುವುದರಿಂದ ಫಲಿತಾಂಶಕ್ಕಾಗಿ ಐದಾರು ದಿನ ಕಾಯುವ ಪರಿಸ್ಥಿತಿ ಎದುರಾಗಿದ್ದು, ಹೀಗಾಗಿ ಜಿಲ್ಲಾಡಳಿತದಿಂದ ಇದೀಗ ಜಿಲ್ಲಾಸ್ಪತ್ರೆಯಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಲ್ಯಾಬ್ ಸ್ಥಾಪಿಸಲಾಗುತ್ತಿದೆ.
ಜಿಲ್ಲೆಯಲ್ಲಿ 16 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು,ಅದರಲ್ಲಿ ಆರು ಜನ ಗುಣಮುಖರಾಗಿದ್ದಾರೆ. ಇದುವರೆಗೂ 7,025 ಜನರ ಗಂಟಲು ದ್ರವವನ್ನ ಪರೀಕ್ಷೆಗೆ ಕಳಿಸಲಾಗಿದ್ದು,ಅದರಲ್ಲಿ 6,558 ಜನರ ವರದಿ ನೆಗಟಿವ್ ಬಂದಿದ್ದು, 441 ಜನರ ವರದಿ ಬರಬೇಕಿದೆ. ದಿನದಿಂದ ದಿನಕ್ಕೆ ಗಂಟಲು ದ್ರವ ಪರೀಕ್ಷಿಸಬೇಕಾದವರ ಸಂಖ್ಯೆ ಅಧಿಕವಾಗುತ್ತಿದೆ. ಪರಿಣಾಮ ಹುಬ್ಬಳ್ಳಿ, ಶಿವಮೊಗ್ಗ, ಬಳ್ಳಾರಿ ಮತ್ತು ದಾವಣಗೆರೆ ಲ್ಯಾಬ್‌ಗೆ ತಪಾಸಣೆಗೆ ಕಳಿಸಲಾಗುತ್ತಿರುವ ವರದಿಗಳು ತಡವಾಗಲಾರಂಭಿಸಿವೆ. ಇದರಿಂದ ಸೋಂಕಿತರನ್ನ ಪತ್ತೆ ಹಚ್ಚುವ ಕಾರ್ಯ ವಿಳಂಬವಾಗುತ್ತಿದೆ. ಇದನ್ನರಿತ ಹಾವೇರಿ ಜಿಲ್ಲಾಡಳಿತ ಇದೀಗ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಪರೀಕ್ಷೆಯ ಲ್ಯಾಬ್ ಸ್ಥಾಪಿಸಲು ಮುಂದಾಗಿದೆ.
ಇಲ್ಲಿ ಸ್ಥಾಪಿತವಾಗುವ ಕೋವಿಡ್-19 ಪರೀಕ್ಷಾ ಪ್ರಯೋಗಾಲಯ 300 ಜನರ ಗಂಟಲು ದ್ರವ ತಪಾಸಣೆ ನಡೆಸುವ ಸಾಮರ್ಥ್ಯ ಹೊಂದಿದೆ. ದಿನದ ಮೂರು ಶಿಫ್ಟ್‌ಗಳಲ್ಲಿ ಕಾರ್ಯನಿರ್ವಹಿಸಿದರೆ 300 ಜನರ ವರದಿಯ ಫಲಿತಾಂಶ ಸಿಗಲಿದೆ. ಇದರಿಂದಾಗಿ ಆದಷ್ಟು ಬೇಗ ಸೋಂಕಿತರು ಪತ್ತೆಯಾಗುತ್ತಾರೆ. ಈಗಿರುವ ಕೋವಿಡ್-19 ಆಸ್ಪತ್ರೆ ಮೇಲ್ಮಹಡಿಯಲ್ಲಿ ಲ್ಯಾಬ್ ಸ್ಥಾಪನೆಗೆ ಸಿದ್ಧತೆ ನಡೆಯುತ್ತಿದೆ. ಜೂನ್ ತಿಂಗಳ ಎರಡನೇಯ ವಾರದಲ್ಲಿ ಲ್ಯಾಬ್ ಕಾರ್ಯನಿರ್ವಹಿಸಲಿದೆ. ಇದಕ್ಕಾಗಿ ಈಗಾಗಲೇ ಸಿಬ್ಬಂದಿ ನೇಮಕಾತಿಗೆ ಅರ್ಜಿ ಸಹ ಕರೆಯಲಾಗಿದೆ.