ಹಾವೇರಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಅಪರಾಧಿಗೆ ಹಾವೇರಿ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣದಂಡನೆ ವಿಧಿಸಿ ಆದೇಶ ಹೊರಡಿಸಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕು ಕುರಡಿಕೇರಿ ಗ್ರಾಮದ ಶೆಟ್ಟಪ್ಪ ಬಸಪ್ಪ ವಡ್ಡರ್ ಮರಣದಂಡನೆಗೆ ಒಳಗಾದ ಅವರಾಧಿ.
ಶಿಗ್ಗಾಂವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 6-05-2019ರಲ್ಲಿ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಲಗಿದ್ದ ಬಾಲಕಿಯನ್ನು ಪಕ್ಕದ ಮನೆಯ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಶೆಟ್ಟೆಪ್ಪ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಾಲಕಿ ಬೇರೆಯವರಿಗೆ ವಿಷಯ ತಿಳಿಸುತ್ತಾಳೆ ಎಂದು ಕತ್ತು ಹಿಸುಕಿ ಶೌಚಾಲಯದಲ್ಲೇ ಕೊಲೆ ಮಾಡಿದ್ದ. ಬಳಿಕ ಘಟನೆ ಬೆಳಕಿಗೆ ಬಂದು ಆರೋಪಿ ವಿರುದ್ಧ ಐಪಿಸಿಯ ವಿವಿಧ ಕಲಂಗಳು ಮತ್ತು ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಶಿಗ್ಗಾಂವಿ ಪೊಲೀಸ್ ಠಾಣೆಯ ಸಿಪಿಐ ಆರ್.ಎಫ್.ದೇಸಾಯಿ ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದೀಗ ಶೆಟ್ಟೆಪ್ಪ ಬಸಪ್ಪ ವಡ್ಡರ್ ಮೇಲಿನ ಆರೋಪ ಸಾಬೀತಾಗಿದ್ದು ಹಾವೇರಿ ಅಧಿಕ ಜಿಲ್ಲಾ ಮತ್ತು ಸತ್ರನ ನ್ಯಾಯಾಲಯದ ಎಫ್ಟಿಎಸ್ಸಿ 1 ನ್ಯಾಯಾಧೀಶ ನಿಂಗನಗೌಡ ಪಾಟೀಲ್ ಅಪರಾಧಿಗೆ ಮರಣದಂಡನೆ ಮತ್ತು 1 ಲಕ್ಷ 50 ಸಾವಿರ ರೂಪಾಯಿಗಳ ದಂಡ ವಿಧಿಸಿದ್ದಾರೆ.
ಅಲ್ಲದೆ ಕರ್ನಾಟಕ ಸರ್ಕಾರ ನೊಂದವರ ಪರಿಹಾರ ನಿಧಿ ಯೋಜನೆಯಡಿ ಇರುವ ಪರಿಹಾರ ನಿಧಿಯಿಂದ ಸರ್ಕಾರ ಬಾಲಕಿಯ ಪೋಷಕರಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರ ವಿಜಯಕುಮಾರ್ ಶಂಕರಗೌಡ ಪಾಟೀಲ್ ವಿಶೇಷ ಸರ್ಕಾರಿ ಅಭಿಯೋಜಕರಾಗಿ ವಾದ ಮಂಡಿಸಿದ್ದರು.
ಮಗಳ ಮೇಲೆ ಅತ್ಯಾಚಾರ; ತಂದೆಗೆ 20 ವರ್ಷ ಜೈಲು ಶಿಕ್ಷೆ: ಮಗಳ ಮೇಲೆ ಅತ್ಯಾಚಾರ ಎಸಗಿದ್ದ ದುರುಳನಿಗೆ ಇಪ್ಪತ್ತು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ಬೆಂಗಳೂರಿನ ಪೋಕ್ಸೋ ಪ್ರಕರಣಗಳ ನ್ಯಾಯಾಲಯ ತೀರ್ಪು ನೀಡಿತ್ತು. 2022ರಲ್ಲಿ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಮಗಳ ಮೇಲೆ 38 ವರ್ಷ ವಯಸ್ಸಿನ ತಂದೆ ನಿರಂತರ ಅತ್ಯಾಚಾರವೆಸಗಿದ್ದನು. ನೊಂದ ಬಾಲಕಿಯ ತಾಯಿ ನೀಡಿದ ದೂರಿನನ್ವಯ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ತನಿಖೆ ನಡೆಸಿದ್ದ ಅಂದಿನ ಠಾಣಾ ಇನ್ಸ್ಪೆಕ್ಟರ್ ಲೋಹಿತ್.ಬಿ.ಎನ್ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪೋಕ್ಸೋ ನ್ಯಾಯಾಧೀಶೆ ಎನ್. ನರಸಮ್ಮ, ಅಪರಾಧಿಗೆ ದಂಡಸಮೇತ ಜೈಲು ಶಿಕ್ಷೆ ವಿಧಿಸಿದ್ದಾರೆ. ಬಾಲಕಿಗೆ ಕಾನೂನು ಪ್ರಾಧಿಕಾರದಿಂದ 7 ಲಕ್ಷ ರೂ ಪರಿಹಾರ ನೀಡುವಂತೆ ಶಿಫಾರಸು ಮಾಡಿದ್ದತು.
ಇದನ್ನೂ ಓದಿ: ಮಗಳ ಮೇಲೆ ಅತ್ಯಾಚಾರ; ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ