ಹಾವೇರಿ: ಜಿಲ್ಲಾಡಳಿತದ ವತಿಯಿಂದ ಮಾಸ್ಕ್ ಡೇ ಅಂಗವಾಗಿ ಜಾಗೃತಿ ಜಾಥಾ ನಡೆಸಲಾಯಿತು. ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಡೆದ ಜಾಥಾಗೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಮಾಸ್ಕ್ ಧರಿಸುವ ಕುರಿತ ಭಿತ್ತಿಪತ್ರ ಹಿಡಿದ ವೈದ್ಯಕೀಯ ಸಿಬ್ಬಂದಿ ಗಮನ ಸೆಳೆದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಜನರಲ್ಲಿ ಮಾಸ್ಕ್ ಧರಿಸುವ ಕುರಿತಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಎಲ್ಲಾ ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್‌ಗಳಲ್ಲಿ ಉಚಿತ ಮಾಸ್ಕ್ ವಿತರಿಸಲಾಗುತ್ತಿದೆ. ಮಾಸ್ಕ್ ಏಕೆ ಧರಿಸಬೇಕು, ಹೇಗೆ ಧರಿಸಬೇಕು ಎಂಬ ಕುರಿತಂತೆ ಜನರಲ್ಲಿ ಅರಿವು ಮೂಡಿಸುತ್ತಿರುವುದಾಗಿ ತಿಳಿಸಿದರು. ಜಿಲ್ಲೆಯ ಜನರಲ್ಲಿ ಮೊದಲಿಗೆ ಮಾಸ್ಕ್ ಕುರಿತಂತೆ ಜಾಗೃತಿ ಮೂಡಿಸಲಾಗುತ್ತದೆ. ಜಾಗೃತಿ ಮೂಡಿಸಿದರೂ ಮಾಸ್ಕ್ ಧರಿಸದಿದ್ದರೆ ನೂರು ರೂಪಾಯಿ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.