ಹಾವೇರಿ: ಪ್ರತಿವರ್ಷ ನಡೆಯುವ ದಾನಮ್ಮ ದೇವಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಟ್ರಸ್ಟ್ವತಿಯಿಂದ ವೃದ್ದಾಶ್ರಮದ ವಯೋವೃದ್ದರನ್ನ ಕರೆದು ಸನ್ಮಾನಿಸುತ್ತಿದೆ. ಈ ವರ್ಷವು ಸಹ 20 ಜನರಿಗೆ ಟ್ರಸ್ಟ್ ದೇವಸ್ಥಾನಕ್ಕೆ ಕರೆಸಿ ಸನ್ಮಾನಿಸಿತು. ವಯೋವೃದ್ದರನ್ನ ಒಂದಡೆ ಕುಳ್ಳಿರಿಸಿ ಸೀರೆ ಸೇರಿದಂತೆ ಹೊಸ ಉಡುಪುಗಳನ್ನ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷೆ ಶೋಭಾತಾಯಿ ಮಾಗಾವಿ, ‘12ನೇ ಶತಮಾನದಲ್ಲಿ ಶರಣೆ ದಾನಮ್ಮ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದರು, ಅವರು ಸಾಮೂಹಿಕ ವಿವಾಹ, ದಾಸೋಹ ಮತ್ತು ಸಮಾಜದ ನಿರ್ಲಕ್ಷ್ಯಕ್ಕೆ ಒಳಗಾದವರ ಸೇವೆ ಮಾಡಿದ್ದಳು. ವೃದ್ಧಾಶ್ರಮದಲ್ಲಿ ವಯೋವೃದ್ದರು ದೇವಸ್ಥಾನ ಸೇರಿದಂತೆ ಇತರೆಡೆ ಹೋಗುವುದು ವಿರಳ’. ಹೀಗಾಗಿ ಅವರನ್ನ ಕರೆಸಿ ದೇವಿಯ ದರ್ಶನ ಮಾಡಿಸಿ ಸನ್ಮಾನಿಸುತ್ತಿರುವುದಾಗಿ ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಯೋವೃದ್ದರು ಟ್ರಸ್ಟ್ ಕಾರ್ಯಕ್ಕೆ ಧನ್ಯವಾದ ಅರ್ಪಿಸಿ, ನಿತ್ಯ ಇದ್ದಲ್ಲಿಯೇ ಇದ್ದ ನಮಗೆ ಈ ರೀತಿ ಸನ್ಮಾನ ಮಾಡಿದ್ದು ಸಂತಸ ತಂದಿದೆ ಎಂದು ಅಭಿಪ್ರಾಯ ಹಂಚಿಕೊಂಡರು. ಜಾತ್ರಾ ಮಹೋತ್ಸವಕ್ಕೆ ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಶ್ರೀಗಳು ಮತ್ತು ಹೊಸಮಠದ ಬಸವಶಾಂತ ಲಿಂಗಶ್ರೀಗಳು ಚಾಲನೆ ನೀಡಿದರು.
ಇದನ್ನೂ ಓದಿ: ಕಬ್ಬಿನ ಬಾಕಿ ಹಣ ನೀಡುವಂತೆ ಆಗ್ರಹ: ಸಕ್ಕರೆ ಸಾಗಿಸುತ್ತಿದ್ದ ಲಾರಿ ತಡೆದು ರೈತರ ಪ್ರತಿಭಟನೆ