ಹಾವೇರಿ : ಹಾನಗಲ್ ವಿಧಾನಸಭಾ ಕ್ಷೇತ್ರದ ಶಾಸಕ ಸಿ ಎಂ ಉದಾಸಿ ಅವರ ನಿಧನವಾಗಿ 20 ದಿನ ಕಳೆದಿಲ್ಲ. ಚುನಾವಣಾ ಆಯೋಗ ಉಪಚುನಾವಣಾ ದಿನಾಂಕ ಸಹ ಘೋಷಣೆ ಮಾಡಿಲ್ಲ. ಆದರೆ, ಕ್ಷೇತ್ರದಲ್ಲಿ ಜೆಡಿಎಸ್, ಕಾಂಗ್ರೆಸ್ ರಾಜಕಾರಣ ಆರಂಭಿಸಿವೆ. ಜೆಡಿಎಸ್ ಈಗಾಗಲೇ ಅಭ್ಯರ್ಥಿ ಘೋಷಣೆ ಮಾಡಿದೆ. ಈ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿಯಾಗಲು ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಮತ್ತು ವಿಧಾನಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ ನಡುವೆ ಪೈಪೋಟಿ ಆರಂಭವಾಗಿದೆ.
ಗ್ರಾಮಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸುತ್ತಿರುವ ಮನೋಹರ್ ತಹಶೀಲ್ದಾರ್, ಕಾಂಗ್ರೆಸ್ ಹೈಕಮಾಂಡ್ ತನಗೆ ಟಿಕೆಟ್ ನೀಡಬೇಕು ಎನ್ನುತ್ತಿದ್ದಾರೆ. ತಮಗಲ್ಲದಿದ್ದರೂ ಸ್ಥಳೀಯ ಮುಖಂಡರಿಗೆ ಟಿಕೆಟ್ ನೀಡಬೇಕು. ಅದನ್ನು ಬಿಟ್ಟು ಕ್ಷೇತ್ರದ ಹೊರಗೆ ಇರುವ ಯಾರಿಗಾದರೂ ಟಿಕೆಟ್ ನೀಡಿದರೆ ತಾವು ಸುಮ್ಮನಿರಲ್ಲ ಎಂದು ಪರೋಕ್ಷವಾಗಿ ಪಕ್ಷದ ನಾಯಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಹೈಕಮಾಂಡ್ ತಮಗೆ ಇಲ್ಲವೇ ಸ್ಥಳೀಯರಿಗೆ ಟಿಕೆಟ್ ನೀಡಬೇಕು. ಹೊರಗಿನವರಿಗೆ ಟಿಕೆಟ್ ನೀಡಿದರೆ ಹೋರಾಟ ಅನಿವಾರ್ಯ ಎನ್ನುವ ಎಚ್ಚರಿಕೆ ನೀಡಿದ್ದಾರೆ. ಕಳೆದ ಬಾರಿ ಮಾಜಿ ಸಚಿವ ಸಿ ಎಂ ಉದಾಸಿಗೆ ಭಾರೀ ಪೈಪೋಟಿ ನೀಡಿದ್ದ ಶ್ರೀನಿವಾಸ ಮಾನೆ ಅವರು ಉಪ ಚುನಾವಣೆಯಲ್ಲೂ ಸಹ ತಾವೇ ಕಾಂಗ್ರೆಸ್ ಅಭ್ಯರ್ಥಿ ಎನ್ನುತ್ತಿದ್ದಾರೆ. ಒಂದು ಬಾರಿ ಕ್ಷೇತ್ರದಲ್ಲಿ ಸೋತಿದ್ದರೂ ಕಳೆದ ಬಾರಿ ಮುತ್ಸದ್ದಿ ರಾಜಕಾರಣಿಗೆ ದೊಡ್ಡ ಪೈಪೋಟಿ ನೀಡಿದ್ದೇನೆ. ಈ ಬಾರಿ ಟಿಕೆಟ್ ನೀಡಿದರೆ ಶಾಸಕನಾಗುವುದು ಪಕ್ಕಾ ಎನ್ನುತ್ತಿದ್ದಾರೆ.
ಇವೆರಡು ಪಕ್ಷಗಳು ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆಸಿವೆ. ಈ ಮಧ್ಯೆ ಸಿ ಎಂ ಉದಾಸಿ ಆಯ್ಕೆಯಾಗಿದ್ದ ಬಿಜೆಪಿ ಪಕ್ಷ ಮಾತ್ರ ಯಾವುದೇ ಗುಟ್ಟು ಬಿಟ್ಟು ಕೊಡುತ್ತಿಲ್ಲ. ಚುನಾವಣಾ ದಿನಾಂಕ ಘೋಷಣೆಯಾಗುವ ಮುನ್ನವೇ ಕಾಂಗ್ರೆಸ್‌ನಲ್ಲಿ ಎರಡು ಬಣಗಳಾಗಿರುವುದು ಕಾಂಗ್ರೆಸ್ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಕಾಂಗ್ರೆಸ್ ಹೈಕಮಾಂಡ್ ಯಾರನ್ನ ಅಭ್ಯರ್ಥಿ ಮಾಡುತ್ತೆ, ಬಿಜೆಪಿ ಅಭ್ಯರ್ಥಿ ಯಾರಾಗ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.