ಹಾವೇರಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಉಚಿತವಾಗಿ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಬಸ್‌ಗಳು ಕಿಕ್ಕಿರಿದು ತುಂಬಿದ್ದು ಜನ ನಿಂತು ಪ್ರಯಾಣಿಸುತ್ತಿದ್ದಾರೆ. ಆದರೆ ಇನ್ನೊಂದೆಡೆ, ಖಾಸಗಿ ವಾಹನಗಳಲ್ಲಿ ಸಂಚರಿಸಲು ಪ್ರಯಾಣಿಕರೇ ಇಲ್ಲದಾಗಿದೆ. ಇದರಿಂದಾಗಿ ಟಂಟಂ ಮ್ಯಾಜಿಕ್, ಮೆಟಾಡೋರ್ ಮ್ಯಾಕ್ಸಿ ಕ್ಯಾಬ್ ಮತ್ತು ಮಿನಿ ಬಸ್‌ಗಳು ಪ್ರಯಾಣಿಕರಿಲ್ಲದೇ ನಿಲುಗಡೆ ತಾಣದಲ್ಲಿ ನಿಂತಲ್ಲೇ ನಿಂತು ನಷ್ಟ ಅನುಭವಿಸುತ್ತಿವೆ. ದಿನನಿತ್ಯ ನೂರಾರು ಕಿಲೋಮೀಟರ್ ಸಂಚರಿಸಿ ಬರುತ್ತಿದ್ದ ಖಾಸಗಿ ವಾಹನಗಳು ಸಾವಿರಾರು ರೂಪಾಯಿ ಅದಾಯ ಗಳಿಸುತ್ತಿದ್ದವು. ಈ ವಾಹನಗಳಿಗೀಗ ಬೇಡಿಕೆಯೇ ಇಲ್ಲದಂತಾಗಿದೆ.
ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಬಹುತೇಕ ಮಹಿಳೆಯರು ಸಾರಿಗೆ ಇಲಾಖೆಯ ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ವಾಹನ ಪಾಳೆಯದಲ್ಲಿ ನಿಲ್ಲಿಸಿದರೂ ನಾಲ್ಕೈದು ಜನ ಪ್ರಯಾಣಿಕರು ಹತ್ತುತ್ತಾರೆ. ಡೀಸೆಲ್‌ಗೂ ದುಡ್ಡಾಗಲ್ಲವೆಂದು ಅವರನ್ನು ಇಳಿಸಿ ಮನೆಗೆ ಹೋಗುವ ಪರಿಸ್ಥಿತಿ ಇದೆ ಎನ್ನುತ್ತಾರೆ ಖಾಸಗಿ ವಾಹನಗಳ ಮಾಲೀಕರು, ಚಾಲಕರು.
ಹಾವೇರಿ ನಗರ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಸುಮಾರು 50ಕ್ಕೂ ಅಧಿಕ ಮೆಟಡೋರ್‌ಗಳಿವೆ. ಈ ವಾಹನಗಳು ಮೊದಲಿಗೆ ದಿನನಿತ್ಯ ತಮ್ಮದೇ ಆದ ರೂಟ್‌ಗಳಲ್ಲಿ ಸಂಚರಿಸುತ್ತಿದ್ದವು. ಇನ್ನು ಕೆಲವು ಮೆಟಡೋರ್ ಮದುವೆ ನಿಶ್ಚಿತಾರ್ಥ ಅಂತಾ ಬಾಡಿಗೆ ಹೋಗುತ್ತಿದ್ದವು. ಆದರೆ ಶಕ್ತಿ ಯೋಜನೆ ಬಂದಾಗಿನಿಂದ ರೂಟ್ ಇಲ್ಲ, ಬಾಡಿಗೆಯೂ ಇಲ್ಲ ಎಂದು ಹೇಳುತ್ತಿದ್ದಾರೆ.
ನಗರದಲ್ಲಿ ನೂರಕ್ಕೂ ಅಧಿಕ ಜನರು ಟಂಟಂ ವಾಹನ ಇಟ್ಟುಕೊಂಡಿದ್ದಾರೆ. ಅವರ ಪರಿಸ್ಥಿತಿ ಭಿನ್ನವಾಗಿಲ್ಲ. ಪ್ರತಿನಿತ್ಯ ಮನೆಯಿಂದ ಪಾಳಿಗೆ ಹಚ್ಚಲು ಗಾಡಿ ತರುವುದಕ್ಕೂ ಡೀಸೆಲ್ಗೆ ಹಣ ಇಲ್ಲವೆನ್ನುತ್ತಿದ್ದಾರೆ. ಸರ್ಕಾರಕ್ಕೆ ಟ್ಯಾಕ್ಸ್ ಹೇಗೆ ಕಟ್ಟಬೇಕು, ಇನ್ಸೂರನ್ಸ್ ಹೇಗೆ ಕಟ್ಟಬೇಕು ಎನ್ನುವ ಚಿಂತೆಯಲ್ಲಿದ್ದಾರೆ. ಟ್ಯಾಕ್ಸ್ ಮತ್ತು ಇನ್ಸೂರನ್ಸ್ ಇರಲಿ, ಬ್ಯಾಂಕಿನ ಸಾಲ ಹೇಗೆ ತೀರಿಸಲಿ ಎಂಬ ಚಿಂತೆ ಟಂಟಂ ವಾಹನಗಳ ಮಾಲೀಕರದ್ದು.
ನಮ್ಮ ವಾಹನಗಳಲ್ಲಿ ಪ್ರಯಾಣಿಕರು ಹತ್ತಿದ್ರೆ ಮಾತ್ರ ದಿನದ ಜೀವನ ನಡೆಯುತ್ತದೆ. ಆದರೆ ಸರ್ಕಾರ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಮಹಿಳೆಯರಿಗೆ ಸೌಲಭ್ಯ ಕಲ್ಪಿಸಿದ ಬಳಿಕ ಪ್ರಯಾಣಿಕರ ಕೊರತೆಯಿಂದಾಗಿ ವಾಹನಗಳನ್ನು ಓಡಿಸಲಾಗುತ್ತಿಲ್ಲ. ನಮ್ಮ ಸಂಸಾರ ಹೇಗೆ ನಿಭಾಯಿಸಬೇಕು?. ನಮ್ಮ ಮಡದಿ- ಮಕ್ಕಳ ಪಾಡೇನು ಎಂಬ ಕೊರಗು ಸುಡುತ್ತಿದೆ. ಇದರಿಂದಾಗಿ ನಮ್ಮ ಜೀವನ ಮುರಾಬಟ್ಟೆಯಾಗಿದೆ ಎನ್ನುತ್ತಾರೆ ವಾಹನ ಚಾಲಕರು.
ಇದೇ ರೀತಿ ಮುಂದುವರೆದರೆ ನಾವು ಬೀದಿಗೆ ಬರುವದರಲ್ಲಿ ಎರಡು ಮಾತಿಲ್ಲ. ಆದಷ್ಟು ಬೇಗ ನಮ್ಮ ಸಹಾಯಕ್ಕೆ ಸರಕಾರ ಬರಬೇಕು. ಯಾವುದಾದರೂ ದಾರಿ ತೋರಿಸಿದರೆ ನಾವು ಜೀವನ ಸಾಗಿಸಬಹುದು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕೋವಿಡ್ ವೇಳೆ ಸಂದಿಗ್ದ ಪರಿಸ್ಥಿತಿಯಲ್ಲಿ ನಾವು ಬದುಕಿದ್ದೆವು. ಅದಕ್ಕಿಂತ ಈ ವ್ಯವಸ್ಥೆ ಭಯ ಹುಟ್ಟಿಸುತ್ತಿದೆ. ಸಾರಿಗೆ ಬಸ್‌ಗಳು ಸೌಲಭ್ಯ ಇಲ್ಲದ ಮಾರ್ಗಗಳಲ್ಲಿ ಮಾತ್ರ ಖಾಸಗಿ ವಾಹನಗಳಲ್ಲಿ ಜನರು ಪಯಣಿಸುತ್ತಿದ್ದಾರೆ. ಆ ರೀತಿ ಮಾರ್ಗಗಳು ತಾಲೂಕಿಗೆ ಒಂದೆರಡು ಇರುತ್ತವೆ. ಅವುಗಳನ್ನು ಹೊರತುಪಡಿಸಿ ನಮ್ಮ ಕಡೆ ಯಾವ ಪ್ರಯಾಣಿಕರು ಬರುತಿಲ್ಲ ಎಂದು ಟಂಟಂ ವಾಹನ ಚಾಲಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.