ರಾಣೆಬೆನ್ನೂರು: ನೂತನ ಶಾಸಕ ಅರುಣಕುಮಾರ ಪೂಜಾರ ಅವರಿಗೆ ಸರ್ಕಾರದ ವತಿಯಿಂದ ನೀಡಿರುವ ಕೊಠಡಿ ನವೀಕರಣ ಮಾಡಲು ಎಷ್ಟು ಅನುದಾನ ನೀಡಿದ್ದೀರಾ ಹಾಗೂ ಅದರ ಲೆಕ್ಕ ನೀಡುವಂತೆ ತಾಲೂಕು ಪಂಚಾಯತಿ ಸದಸ್ಯರು ಆಗ್ರಹಿಸಿದ್ದಾರೆ.
ನಗರದ ತಾಲೂಕು ಪಂಚಾಯತಿ ಸಭಾಭವನದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು ಹಾಗೂ ಅಧ್ಯಕ್ಷರಿಗೆ ಪಂಚಾಯತಿ ಸದಸ್ಯರು ಲೆಕ್ಕ ಕೇಳಿದ್ದಾರೆ. ತಾಲೂಕು ಪಂಚಾಯತಿ ಆವರಣದಲ್ಲಿರುವ ಕಟ್ಟಡವನ್ನು ಲಕ್ಷಾಂತರ ರೂ. ಖರ್ಚು ಮಾಡಿ ನವೀಕರಣ ಮಾಡಲಾಗಿದೆ. ಆದರೆ ತಾಲೂಕು ಪಂಚಾಯತ್ ಸಭೆಯಲ್ಲಿ ಅನುಮೋದನೆ ತೆಗೆದುಕೊಳ್ಳದೆ ಮಾಡಲಾಗಿದೆ. ಅಲ್ಲದೆ ಅಧಿಕಾರಿಗಳು ಮತ್ತು ಅಧ್ಯಕ್ಷರು ಸಹ ಸದಸ್ಯರಿಗೆ ಮಾಹಿತಿ ನೀಡಿಲ್ಲ. ತಾಲೂಕು ಪಂಚಾಯತಿ ಸದಸ್ಯರಿಗೆ 150 ರೂ. ಭತ್ಯೆ ಕೊಡುವುದಕ್ಕೆ ಆಗಲ್ಲ. ಆದರೆ ಶಾಸಕರ ಕೊಠಡಿ ನವೀಕರಣ ಮಾಡುವುದಕ್ಕೆ ಹೇಗೆ ಅನುದಾನ ಕೊಟ್ಟಿದ್ದೀರಿ ಎಂದು ತಾಪಂ ಸದಸ್ಯ ನೀಲಕಂಠಪ್ಪ ಕುಸಗೂರ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ.ಕಾಂಬಳೆ, ಈ ಕಟ್ಟಡ ನವೀಕರಣಕ್ಕೆ ತಾಲೂಕು ಪಂಚಾಯತಿಯ ಯಾವುದೇ ಅನುದಾನ ಬಳಸಿಕೊಂಡಿಲ್ಲ. ಇದರ ಅಂದಾಜು ಪಟ್ಟಿಯನ್ನು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ತಯಾರಿಸಿದ್ದಾರೆ. ಮುಂದಿನ ಸಭೆಯಲ್ಲಿ ನವೀಕರಣ ಮೊತ್ತದ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ನಾವು ಇದ್ದೂ ಇಲ್ಲದಂತಾಗಿದೆ. ನಮಗೆ ಯಾವುದೇ ಮಾಹಿತಿ ನೀಡುವವರು ಇಲ್ಲದಂತಾಗಿದೆ ಎಂದು ಆರೋಪ ಮಾಡಿದರು.