ಹಾವೇರಿ: ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ನಡೆದ ಜನಸ್ವರಾಜ್ ಸಮಾವೇಶವನ್ನು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ(BSY) ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನನಗೆ ಯಾರು ರಾಜೀನಾಮೆ ನೀಡಿ ಎಂದು ಒತ್ತಾಯ ಮಾಡಿರಲಿಲ್ಲ. ಬೇರೆಯವರಿಗೆ ಸಹ ಅವಕಾಶ ಸಿಗಲಿ ಎಂದು ರಾಜೀನಾಮೆ ನೀಡಿದ್ದೇನೆ ಎಂದು ಯಡಿಯೂರಪ್ಪ(Yediyurappa) ತಿಳಿಸಿದರು.
ಜನಪ್ರತಿನಿಧಿಯಾಗುವವರಗೆ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಗುಣ ಇರಬೇಕು. ಜನರು ಮನೆಗೆ ಬಂದಾಗ ಅವರ ಕೆಲಸ ಮಾಡಿಕೊಡಬೇಕು. ಅವರಿಂದ ಏನಾದರೂ ಅಪೇಕ್ಷೆಪಟ್ಟರೆ ಅದು ಚುನಾಯಿತ ಪ್ರತಿನಿಧಿಗಳಿಗೆ ದೊಡ್ಡ ಕಳಂಕ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಬಿ.ಶ್ರೀರಾಮಲು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಮೊನ್ನೆ - ಮೊನ್ನೆ ಜೋಡೆತ್ತುಗಳಾಗಿದ್ದವರು ಈಗ ಕಳ್ಳೇತ್ತುಗಳಾಗಿವೆ ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದರು. ಅವರಿಬ್ಬರ ಸಂಸಾರದಲ್ಲಿ ಹಾನಗಲ್ ಶಾಸಕ ಮಾನೆ ಬಡವಾಗಿದ್ದಾರೆ ಎಂದು ಆರೋಪಿಸಿದರು.
ರಾಮುಲು ಏಕವಚನ ಬಳಕೆ
ಭಾಷಣದಲ್ಲಿ ಶ್ರೀರಾಮುಲು ಯಡಿಯೂರಪ್ಪ ಅವರನ್ನು ಹೊಗಳುವಾಗ ಅವನು ಇವನು ಎನ್ನುವ ಮೂಲಕ ಸಭೆಯಲ್ಲಿದ್ದ ನಾಯಕರನ್ನ ಕ್ಷಣಕಾಲ ಗಲಿಬಿಲಿಗೊಳಿಸಿತು. ಮತ್ತೆ ತಿದ್ದಿಕೊಂಡ ಶ್ರೀರಾಮುಲು, ಯಡಿಯೂರಪ್ಪರು ಎಂದು ಬಹುವಚನದಲ್ಲಿ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಸಚಿವ ಬಿ.ಸಿ.ಪಾಟೀಲ್, ಸಂಸದ ಶಿವಕುಮಾರ್ ಉದಾಸಿ ಶಾಸಕರು ವಿಧಾನಪರಿಷತ್ ಸದಸ್ಯರು ಸೇರಿದಂತೆ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.