ಹಾವೇರಿ: ಜಿಲ್ಲೆಯಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಸಂಚರಿಸುತ್ತಿದ್ದ ಲಾರಿ ತಡೆದು ಚಾಲಕನ್ನು ಹತ್ಯೆಗೈದು ಸ್ಟೀಲ್ ಕಳ್ಳತನ ಮಾಡಿದ್ದ ಪ್ರಕರಣವನ್ನು ಹಾವೇರಿ ಪೊಲೀಸರು ಬಗೆಹರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿಗೆ ಬಲೆ ಬೀಸಲಾಗಿದೆ. ಆತನನ್ನೂ ಆದಷ್ಟು ಬೇಗ ಬಂಧಿಸುವುದಾಗಿ ಹಾವೇರಿ ಎಸ್ಪಿ ಶಿವಕುಮಾರ್ ಗುಣಾರೆ ತಿಳಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಜೂ 14ರಂದು ಸ್ಟೀಲ್ ಸಾಗಿಸುತ್ತಿದ್ದ ಲಾರಿಯ ಚಾಲಕನನ್ನು ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಲಾರಿಯಲ್ಲಿದ್ದ ಸುಮಾರು 1 ಕೋಟಿ 33 ಲಕ್ಷ ರೂಪಾಯಿ ಬೆಲೆಬಾಳುವ ಸ್ಟೀಲ್ ಸರಕನ್ನು ಬೇರೆ ಲಾರಿಗೆ ಹಾಕಿಕೊಂಡು ಪರಾರಿಯಾಗಿದ್ದರು. ಚಾಲಕ ಗೋವಿಂದ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ. ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದರು. ಇದೀಗ ಪ್ರಕರಣದಲ್ಲಿ ಭಾಗಿಯಾಗಿರುವ 5 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಹನುಮಂತ, ಶಿವರಾಮ, ಶಿವಕುಮಾರ್, ಸಂಜೀವ, ಚಂದ್ರು ಮತ್ತು ಪವನ್ ಎಂದು ಗುರುತಿಸಲಾಗಿದೆ. ಪವನ್ ಪರಾರಿಯಾಗಿದ್ದಾನೆ ಎಂದು ಹೇಳಿದರು.
ಜೆಸಿಬಿ, ಟಿಪ್ಪರ್ ವಶಕ್ಕೆ: ಇದರಲ್ಲಿ ಐವರು ಆರೋಪಿಗಳು ಹಾವೇರಿ ಜಿಲ್ಲೆಯವರಾಗಿದ್ದಾರೆ. ಹನುಮಂತ ಗದಗ ಜಿಲ್ಲೆ ಆಡವಿಸೋಮಾಪುರ ಗ್ರಾಮದವನು. ಬಂಧಿತರಿಂದ 1 ಕೋಟಿ 33 ಲಕ್ಷ ರೂಪಾಯಿ ಮೌಲ್ಯದ ಸ್ಟೀಲ್ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಘಟನೆಗೆ ಬಳಿಸಿದ ಜೆಸಿಬಿ ಮತ್ತು ಟಿಪ್ಪರ್ ವಶಪಡಿಸಿಕೊಳ್ಳಲಾಗಿದೆ. ಬೈಕ್, ನಾಲ್ಕು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಾವೇರಿ ಎಸ್ಪಿ ಶಿವಕುಮಾರ್ ಗುಣಾರೆ ಮತ್ತು ಎಎಸ್ಪಿ ಸಿ. ಗೋಪಾಲ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ತಂಡ ರಚನೆ ಮಾಡಿದ್ದರು. ಹಾವೇರಿ ಶಹರ ಪೊಲೀಸ್ ಠಾಣೆಯ ಸುರೇಶ್ ಸಗರಿ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದರು. ಡಿವೈಎಸ್ಪಿ ಶಿವಾನಂದ ಚಲವಾದಿ, ಬ್ಯಾಡಗಿ ಸಿಪಿಐ ಬಸವರಾಜ್ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಲಾರಿ ಚಾಲಕರು ಎಚ್ಚರದಿಂದಿರಬೇಕು: ಹಾವೇರಿ ಜಿಲ್ಲೆಯಲ್ಲಿ ತಡಸದಿಂದ ಚಳಗೇರಿ ಟೋಲ್‌ವರೆಗೆ ಸುಮಾರು 110 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು, ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ರೀತಿಯ ಕೋಟ್ಯಂತರ ರೂಪಾಯಿ ವಸ್ತುಗಳ ಸಾಗಾಣಿಕೆ ಮಾಡುವ ಲಾರಿ ಚಾಲಕರು ಸದಾ ಎಚ್ಚರದಿಂದ ಇರಬೇಕು. ಚಾಲಕರ ಜೊತೆ ಸಹಾಯಕ ಅಥವಾ ಇನ್ನೊಬ್ಬ ಚಾಲಕ ಇದ್ದರೆ ಒಳ್ಳೆಯದು ಎಂದು ಶಿವಕುಮಾರ್ ಸಲಹೆ ನೀಡಿದರು.
ಘಟನೆ ನಡೆದು 72 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿರುವ ಹಾವೇರಿ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಕರಣ ಬೇಧಿಸುವಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿಗೆ ರಿವಾರ್ಡ್ ಘೋಷಿಸುವ ಮೂಲಕ ಹಾವೇರಿ ಎಸ್ಪಿ ಶಿವಕುಮಾರ್ ಗುಣಾರೆ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಹೆದ್ದಾರಿಯಲ್ಲಿ ವಾಹನ ತಡೆದು ಚಾಲಕನ ಹತ್ಯೆ; ಲಕ್ಷಾಂತರ ಮೌಲ್ಯದ ಸ್ಟೀಲ್‌ನೊಂದಿಗೆ ದುಷ್ಕರ್ಮಿಗಳು ಪರಾರಿ