ಹಾವೇರಿ: ಕೃಷಿ ಇಲಾಖೆಯು ಜಿಲ್ಲೆಯ ರೈತರಿಗೆ ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ. ರೈತಸಂಘಗಳ ಉತ್ಪಾದನಾ ಘಟಕಗಳ ಸಹಭಾಗಿತ್ವದಲ್ಲಿ ಡ್ರೋನ್ ಮೂಲಕ ನ್ಯಾನೋ ಯೂರಿಯೂ ಸಿಂಪಡಣಿಯ ಕುರಿತು ಬ್ಯಾಡಗಿ ತಾಲೂಕಿನ ಶಿಡೇನೂರು ಗ್ರಾಮದಲ್ಲಿ ಪ್ರಾತ್ಯಕ್ಷಿಕೆ ನಡೆಯಿತು. ಡ್ರೋನ್ಗೆ ಸಂಪರ್ಕಿಸಲ್ಪಟ್ಟ 10 ಲೀಟರ್ ಕ್ಯಾನ್‌ನಲ್ಲಿ 9 ಲೀಟರ್ ನೀರು ಮತ್ತು ಒಂದು ಲೀಟರ್ ನ್ಯಾನೋ ಯೂರಿಯಾ ಗೊಬ್ಬರ ಹಾಕಿ ಗೋವಿನಜೋಳದ ಬೆಳೆಗೆ ಸಿಂಪಡಿಸಲಾಯಿತು.
ಸುಮಾರು 6 ರಿಂದ 8 ನಿಮಿಷದ ಅವಧಿಯಲ್ಲಿ ಡ್ರೋನ್ ಒಂದೆಕರೆ ಮೆಕ್ಕೆಜೋಳವಿದ್ದ ಜಮೀನಿಗೆ ನ್ಯಾನೋ ಯೂರಿಯಾ ಗೊಬ್ಬರ ಸಿಂಪಡಿಸಿತು. ಈ ಕುರಿತು ಮಾತನಾಡಿದ ಅಧಿಕಾರಿಗಳು, "ಬಹಳಷ್ಟು ರೈತರು ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ಹರಳು ಯೂರಿಯೂ ಗೊಬ್ಬರವನ್ನು ಕೈಯಿಂದ ಸಿಂಪಡಿಸುತ್ತಾರೆ. ಕೈಯಿಂದ ಗೊಬ್ಬರ ಸಿಂಪಡಿಸಿದರೆ ಶೇ 30ರಷ್ಟು ಮಾತ್ರ ಬೆಳೆಗಳಿಗೆ ಸಿಂಪಡಣೆಯಾಗುತ್ತದೆ. ಡ್ರೋನ್ ಮೂಲಕ ಸಿಂಪಡಿಸಿದರೆ ಶೇ 85 ರಷ್ಟು ಬೆಳೆಗಳಿಗೆ ತಲುಪುತ್ತದೆ. ಅಲ್ಲದೆ ಇದು ಕಡಿಮೆ ಅವಧಿಯಲ್ಲಿ ಕಡಿಮೆ ಖರ್ಚು ಮತ್ತು ಕಡಿಮೆ ಶ್ರಮದ ಮೂಲಕ ಹೆಚ್ಚು ಬೆಳೆಗಳಿಗೆ ತಲುಪುತ್ತದೆ" ಎಂದು ತಿಳಿಸಿದರು.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ: 15ಕ್ಕೂ ಹೆಚ್ಚು ಜನರು ವಶಕ್ಕೆ, 6 ಪೊಲೀಸ್ ತಂಡಗಳಿಂದ ತನಿಖೆ