ಹಾವೇರಿ: ಹೃದ್ರೋಗ ತಜ್ಞರು ನನಗೆ ಹೆಚ್ಚಿಗೆ ಮಾತನಾಡಬೇಡ ಎಂದಿದ್ದಾರೆ. ಆದರೆ, ನೀವೇ ನನ್ನ ಹೃದಯವಾಗಿದ್ದರಿಂದ ಅವರ ಸಲಹೆ ಪಾಲಿಸಲಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹೃದಯ ಮತ್ತು ಮಂಡಿ ಶಸ್ತ್ರಚಿಕಿತ್ಸೆ ನಂತರ ಪ್ರಥಮ ಬಾರಿಗೆ ಸ್ವಕ್ಷೇತ್ರದ ಜನರನ್ನು ಭೇಟಿಯಾಗಿ ಮಂಗಳವಾರ ಮಾತನಾಡಿದ ಅವರು, ನಿಮ್ಮ ಭೇಟಿ ಬಳಿಕ ನನಗೆ ಹೃದಯದ ಶಸ್ತ್ರಚಿಕಿತ್ಸೆ ಆಗಿರುವುದನ್ನೇ ಮರೆತಿರುವೆ ಎಂದು ಭಾವುಕರಾದರು.
ಕಳೆದ ಒಂದೂವರೆ ವರ್ಷದಿಂದ ಮಂಡಿನೋವಿನಿಂದ ಬಳಲುತ್ತಿದ್ದ ನಾನು ಶಸ್ತ್ರಚಿಕಿತೆ ಮಾಡಿಸಲು ಹೋಗಿದ್ದೆ. ಮುಖ್ಯಮಂತ್ರಿ ಆಗಿ ಕೆಲಸ ಮಾಡುತ್ತಿದ್ದಾಗ ಶಸ್ತ್ರಚಿಕಿತ್ಸೆಗೆ ಸಮಯ ಸಿಕ್ಕಿರಲಿಲ್ಲ. ಆದರೆ, ಶಸ್ತ್ರಚಿಕಿತ್ಸೆಗೂ ಮುನ್ನ ಹೃದಯ ತಪಾಸಣೆ ಮಾಡಬೇಕು. ಅದು ಆರೋಗ್ಯಪೂರ್ಣವಾಗಿದ್ದರೆ ಮಾತ್ರ ಮಂಡಿ ಶಸ್ತ್ರಚಿಕಿತ್ಸೆ ಮಾಡುವುದಾಗಿ ವೈದ್ಯರು ತಿಳಿಸಿದ್ದರು. ಇಸಿಜಿ ಇಕೋ ಮಾಡಿಸಿದಾಗ ಹೃದಯದಲ್ಲಿ ಯಾವ ಸಮಸ್ಯೆಯೂ ಕಾಣಿಸಿಕೊಳ್ಳಲಿಲ್ಲ. ಆದರೆ, ಆಂಜಿಯೋಗ್ರಾಮ್ (ರಕ್ತನಾಳ) ಪರೀಕ್ಷಿಸಿದಾಗ ಹೃದಯದಲ್ಲಿ ಎರಡು ಸಣ್ಣ, ಒಂದು ದೊಡ್ಡದಾದ ಬ್ಲಾಕ್ಗಳಿರುವುದು ಗೊತ್ತಾಯಿತು. ವೈದ್ಯರಿಗೆ ನೋವಿನ ಅನುಭವವಾಗಿಲ್ಲ ಎಂದು ತಿಳಿಸಿದೆ. ವೈದ್ಯರು ಸಕ್ಕರೆ ಖಾಯಿಲೆ ಇರುವ ಕಾರಣ ನೋವಿನ ಅರಿವು ಬಂದಿಲ್ಲವೆಂದರು. ಈ ಹಿನ್ನೆಲೆ ಸ್ಟಂಟ್ ಅಳವಡಿಸುವ ಬದಲು ಹೃದಯ ಶಸ್ತ್ರಚಿಕಿತ್ಸೆ ಮಾಡಿದರು. ಈಗ ನಾನು ಮೊದಲಿಗಿಂತ ಹೆಚ್ಚು ಉತ್ಸಾಹ ಭರಿತನಾಗಿದ್ದೇನೆ. ಇದೆಲ್ಲ ನಡೆದಿರುವುದು ಕ್ಷೇತ್ರದ ಜನಸ್ಥೋಮದ ಆಶೀರ್ವಾದ ಮತ್ತು ಪುಣ್ಯದ ಫಲದಿಂದ. ದೇವಿಯ ಅನುಗ್ರಹದಿಂದ ನಾನು ನಿಮ್ಮ ಮುಂದೆ ಬಂದು ನಿಂತಿದ್ದೇನೆ ಎಂದು ತಮ್ಮ ಆರೋಗ್ಯದ ಗುಟ್ಟು ಬಿಟ್ಟುಕೊಟ್ಟರು.
ಇದೆಲ್ಲವೂ ಗೊತ್ತಾಗದಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ. ದೇವರು ನಿಮ್ಮ ಸೇವೆ ಮಾಡಲು ಪುನರ್ಜನ್ಮ ನೀಡಿದ್ದಾನೆ. ನಾವೆಲ್ಲ ಒಂದೇ ಕುಟುಂಬದ ಸದಸ್ಯರಿದ್ದಂತೆ. ನಮ್ಮ ನಡುವೆ ಅವಿನಾಭಾವ ಸಂಬಂಧವಿದ್ದು, ಮುಂದಿನ ಜನ್ಮ ಅನ್ನುವುದಿದ್ದರೆ ನನ್ನನ್ನು ಶಿಗ್ಗಾಂವಿ - ಸವಣೂರು ತಾಲೂಕಿನ ಮಣ್ಣಿನಲ್ಲಿ ಹುಟ್ಟಿಸಲಿ. ದೇವರಲ್ಲಿ ಇದನ್ನೇ ಬೇಡಿಕೊಳ್ಳುವೆ ಎಂದರು.
ನಾವು ಮಾತನಾಡಬಾರದು, ನಮ್ಮ ಕೆಲಸ ಮಾತನಾಡಬೇಕು ಎನ್ನುವ ಅರಿವು ನನಗಾಗಿದೆ. ರಾಜ್ಯದ ಜನರೆಲ್ಲ ನನ್ನ ಆರೋಗ್ಯ ವಿಚಾರಿಸಿ ನಮ್ಮ ಕೆಲಸಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ರಾಜ್ಯ ಕೇವಲ ನೈಸರ್ಗಿಕ ಶ್ರೀಮಂತವಷ್ಟೇ ಅಲ್ಲ ಇಲ್ಲಿಯ ಜನ ಹೃದಯ ಶ್ರೀಮಂತರಿದ್ದಾರೆ. ರಾಜಕಾರಣಿಗೆ ತಾನು ಮಾಡಿದ ಕೆಲಸ ಅಲ್ಪ ಅನ್ನಿಸುತ್ತದೆ. ಇನ್ನು ಹೆಚ್ಚಿನ ಕೆಲಸ ಮಾಡಬೇಕು ಎನ್ನುವುದು ಮನದಲ್ಲಿ ಬರುತ್ತದೆ ಎಂದು ತಿಳಿಸಿದರು.
ಅಧಿಕಾರವಿದ್ದಾಗ ಜನ ಯಾವ ರೀತಿ ಇರುತ್ತಾರೆ, ಅಧಿಕಾರ ಕಳೆದುಕೊಂಡಾಗ ಜನ ಯಾವ ರೀತಿ ನೋಡುತ್ತಾರೆ ಎನ್ನುವುದು ನನಗೆ ಗೊತ್ತು. ಆದರೆ, ಪವರ್ ಪಾಲಿಟಿಕ್ಸ್ ಮಾಡಿದವರು ಮೊದಲು ಕಬ್ಬು ಇದ್ದಂಗೆ ಇರುತ್ತಾರೆ. ಆದರೆ, ಅಧಿಕಾರ ಹೋದ ಮೇಲೆ ಹತ್ತಿಕಟ್ಟಿಗೆ ಆದಂಗೆ ಆಗುತ್ತಾರೆ. ಅಧಿಕಾರ ಸರ್ವಸ್ವವಲ್ಲ, ಅಧಿಕಾರವಿದ್ದಾಗ ಸಾರ್ಥಕತೆ, ನಡೆ, ನುಡಿ ಮಾಡಿದರೆ ಜನರ ಮನದಲ್ಲಿ ಶಾಶ್ವತವಾಗಿರುತ್ತೇವೆ.
ಕರ್ನಾಟಕ ರಾಜ್ಯವಾದ ಮೇಲೆ 500ಕ್ಕೂ ಅಧಿಕ ಜನ ಮಂತ್ರಿಗಳಾಗಿದ್ದಾರೆ. ಅದರಲ್ಲಿ ಎಷ್ಟು ಜನ ನೆನಪಿದ್ದಾರೆ. ಸುಮಾರು 25ಕ್ಕೂ ಅಧಿಕ ಸಿಎಂ ಆಗಿದ್ದಾರೆ. ಹಾಲಿ ಇರುವರು ಮಾಜಿ ಆಗುವವವರು, ಮಾಜಿ ಆಗಿರುವವರು ಭಾವಿ ಆಗುವುದು... ಇದೆಲ್ಲ ಜೀವನ ಚಕ್ರ. ಆದರೆ, ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಉಳಿಸಿಕೊಂಡವರು ಯಶಸ್ವಿ ಮತ್ತು ಪ್ರಸಿದ್ಧಿಯಾಗುತ್ತಾರೆ ಎಂದು ಬೊಮ್ಮಾಯಿ ತಮ್ಮ ಮೂವತ್ತೈದು ವರ್ಷದ ರಾಜಕೀಯದ ಹಾದಿ ಬಿಚ್ಚಿಟ್ಟರು.
ಶಸ್ತ್ರಚಿಕಿತ್ಸೆಗೂ ಎರಡು ದಿನ ಮುನ್ನ ಕ್ಷೇತ್ರದ ಕೆಲಸಗಳು ನನ್ನ ಕಣ್ಮುಂದೆ ಬಂದವು. ಶಸ್ತ್ರಚಿಕಿತ್ಸೆ ವೇಳೆ ನನಗೆ ಹೆಚ್ಚು-ಕಡಿಮೆ ಆಗಿದ್ದರೆ ಆ ಕೆಲಸಗಳನ್ನು ಯಾರಿಗೆ ಹೇಳಲಿ ಎಂಬ ವಿಚಾರ ಬಂದಿತ್ತು. ಆದರೆ, ನಾನು ಪ್ರಾರಂಭ ಮಾಡಿದ ಕೆಲಸಗಳನ್ನು ನಾನೇ ಮುಗಿಸುತ್ತೇನೆ ಎಂಬ ವಿಶ್ವಾಸದ ಮೇಲೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ ಎಂದು ಶಸ್ತ್ರಚಿಕಿತ್ಸೆ ದಿನವನ್ನು ನೆನಪು ಮಾಡಿಕೊಂಡರು.
ಇದನ್ನೂ ಓದಿ: ಮಂಡಿ ಶಸ್ತ್ರ ಚಿಕಿತ್ಸೆಗೆ ತೆರಳಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ