ರಾಣೆಬೆನ್ನೂರು: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ನಾಳೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಪೈಪೋಟಿ ಬಹಳ ಕುತೂಹಲ ಮೂಡಿಸಿದೆ.
ಒಟ್ಟು 17 ಸ್ಥಾನಗಳನ್ನು ಹೊಂದಿರುವ ಎಪಿಎಂಸಿ ಅಧ್ಯಕ್ಷ ಗದ್ದುಗೆಗಾಗಿ ಈಗಾಗಲೇ ಎರಡು ಪಕ್ಷದಲ್ಲಿ ತೀವ್ರ ಪೈಪೋಟಿ ನಡೆದಿದೆ. ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ತೆಕ್ಕೆಯಲ್ಲಿರುವ ಎಪಿಎಂಸಿ ಅಧ್ಯಕ್ಷ-ಉಪಾಧ್ಯಕ್ಷ ಗಾದಿಯನ್ನು ಹೇಗಾದರೂ ಮಾಡಿ ಬಿಜೆಪಿ ತೆಕ್ಕೆಗೆ ತರಲು ಬಿಜೆಪಿ ನಾಯಕರು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ.
ಆದರೆ ಕಾಂಗ್ರೆಸ್ ಪಕ್ಷವು 9 ಸದಸ್ಯರನ್ನು ಹೊಂದಿದ್ದು, ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ. ಇನ್ನು ಬಿಜೆಪಿ ಪಕ್ಷ 5 ಸ್ಥಾನ ಹೊಂದಿದ್ದು, ಸರ್ಕಾರದಿಂದ ಆಯ್ಕೆಯಾದ ನಾಮನಿರ್ದೇಶಿತ 3 ಸದಸ್ಯರು ಸೇರಿದರೆ 8 ಸದಸ್ಯರಾಗುತ್ತಾರೆ.
ಒಟ್ಟು 17 ಸದಸ್ಯರ ಪೈಕಿ ಅಧ್ಯಕ್ಷ ಗಾದಿಗೆ ಏರಲು 9 ಸದಸ್ಯರ ಅವಶ್ಯಕತೆ ಇದ್ದು, ನಾಳೆ ನಡೆಯುವ ಚುನಾವಣೆಯಲ್ಲಿ ಆ ಸ್ಥಾನಗಳು ಯಾರ ಪಾಲಾಗಲಿವೆ ಎಂಬುದನ್ನು ಕಾದು ನೋಡಬೇಕಾಗಿದೆ.