ಹಾವೇರಿ: ಜೂಜಾಟದಲ್ಲಿ ತೊಡಗಿದ್ದ ಎಂಟು ಜನರನ್ನು ಬಂಧಿಸಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹುಲಗಿನಕೊಪ್ಪದಲ್ಲಿ ನಡೆದಿದೆ.
ಜೂಜಾಟದಲ್ಲಿ ನಿರತರಾಗಿದ್ದವರಿಂದ ಆರು ಕಾರು, ನಾಲ್ಕು ಬೈಕ್ ಮತ್ತು ಎರಡು ಲಕ್ಷ ಮೂವತ್ತೈದು ಸಾವಿರ ರೂಪಾಯಿ ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನ ಅನ್ವರ್ ಚಿತ್ತೆವಾಲೆ, (37) , ಜಂದಿಸಾಬ್ ಬಳ್ಳಾರಿ(39), 55 ವರ್ಷ ವಯಸ್ಸಿನ ಪ್ರಕಾಶ ಮಲ್ಲಿಗೆರೆ, 38 ವರ್ಷದ ಮಹ್ಮದರಫಿ ಧಾರವಾಡ, 49 ವರ್ಷದ ಸುಮೀತ್ ಮಲ್ಲಾಪುರ, 31 ವರ್ಷದ ಮಂಜುನಾಥ್ ಸುಣಗಾರ, 26 ವರ್ಷದ ಗುರುಪ್ರಸಾದ ಪವಾಡಿಶೆಟ್ಟಿ, 35 ವರ್ಷದ ಗೋವಿಂದ ವಡ್ಡರ್ ಎಂದು ಗುರುತಿಸಲಾಗಿದೆ.
ಧಾರವಾಡ, ಹಾವೇರಿ, ದಾವಣಗೆರೆ ಮತ್ತು ಗದಗ ಜಿಲ್ಲೆಯ ಬೇರೆ ಬೇರೆ ಕಡೆಯಿಂದ ಬಂದಿದ್ದ ಜೂಜುಕೂರರು ಜೂಜಾಟವಾಡುತ್ತಿದ್ದರು ಎನ್ನಲಾಗಿದೆ. ಗ್ರಾಮದ ಆಂಜನೇಯ ದೇವಸ್ಥಾನದ ಬಳಿ ಇರುವ ಸಾರ್ವಜನಿಕ ರಸ್ತೆಯಲ್ಲಿ ಜೂಜಾಟ ಆಟವಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಂಜುನಾಥ ಯಳ್ಳೂರು (35) ಎಂಬಾತ ತಪ್ಪಿಸಿಕೊಂಡು ಓಡಿಹೋಗಿದ್ದಾನೆ ಎಂದು ತಿಳಿದು ಬಂದಿದೆ.
ಹಾನಗಲ್ ಪಿಎಸ್ಐ ಶ್ರೀಶೈಲ್ ಪಟ್ಟಣಶೆಟ್ಟಿ ನೇತೃತ್ವದ ತಂಡ ಈ ದಾಳಿ ಮಾಡಿದ್ದು, ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಶಾರ್ಟ್ ಸರ್ಕ್ಯೂಟ್: 250 ಗ್ರಾಂ ಚಿನ್ನ, ಮನೆ ಸಾಮಗ್ರಿ ಸುಟ್ಟು ಭಸ್ಮ