ಹಾವೇರಿ: ಜಿಲ್ಲೆಯಾದ್ಯಂತ ಮಳೆ ಇಲ್ಲದೇ ರೈತ ಸಮುದಾಯ ಕಂಗಾಲಾಗಿದ್ದು, ಬಿತ್ತನೆ ಬೀಜ ಮತ್ತು ಗೊಬ್ಬರ ಮಾರಾಟಗಾರರು ಕತ್ತೆ ಪೂಜೆ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.
ಕತ್ತೆಯನ್ನ ತಂದು ಅದರ ಮೈ ತೊಳೆದು ಸೀರೆ ಹಾಕಿ ಅರಿಶಿಣ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದರು. ನಂತರ ಮಾಲೆ ಹಾಕಿ ಮಂಗಳಾರತಿ ಮಾಡಿದರು. ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಕತ್ತೆಯ ಮೆರವಣಿಗೆ ನಡೆಸಲಾಯಿತು.
ಉತ್ತರ ಕರ್ನಾಟಕದಲ್ಲಿ ಈ ರೀತಿ ಆಚರಣೆ ಮಾಡಿದರೆ ಮಳೆ ಬರುತ್ತೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಕತ್ತೆಗೆ ಪೂಜೆ ಮಾಡಿದ್ದು, ಉತ್ತಮ ಮಳೆಯಾಗಿ ಉತ್ತಮ ಬೆಳೆಯಾಗಲಿ ಎಂದು ವ್ಯಾಪಾರಸ್ಥರು ದೇವರಲ್ಲಿ ಪ್ರಾರ್ಥಿಸಿದರು.