ಹಾವೇರಿ: ಹಾನಗಲ್‌ನ ಗ್ರಾಮದೇವತೆಯ ಕ್ಷೇತ್ರಕ್ಕೆ ಆಗಮಿಸುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ನಾಮಪತ್ರ ಸಲ್ಲಿಸುವ ವೇಳೆ ಹೊತ್ತಿದ್ದ ಹರಕೆ ತೀರಿಸಿದರು.
ಹಾನಗಲ್ ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಗೆಲುವು ಸಿಗಲೆಂದು ಹಾನಗಲ್‌ನ ಗ್ರಾಮ ದೇವತೆಗೆ ಬೇಡಿಕೊಂಡಿದ್ದರಂತೆ. ಅದರಂತೆ ಇಂದು ದೇವಸ್ಥಾನಕ್ಕೆ ಆಗಮಿಸಿ 11 ತೆಂಗಿನಕಾಯಿ ಹೊಡೆದು ತಮ್ಮ ಹರಕೆ ಸಂಪೂರ್ಣಗೊಳಿಸಿದರು. ಈ ವೇಳೆ ಡಿಕೆಶಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಹಾನಗಲ್ ನೂತನ ಶಾಸಕ ಶ್ರೀನಿವಾಸ ಮಾನೆ ಸಾಥ್ ನೀಡಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2023ರ ವಿಧಾನಸಭೆ ಚುನಾವಣೆಗೆ ಹಾನಗಲ್ ಫಲಿತಾಂಶ ಮುಹೂರ್ತ ಇದ್ದಂತೆ. ಇಲ್ಲಿಯ ಮತದಾರರು ಪ್ರಬುದ್ಧರಾಗಿದ್ದಾರೆ. ಅದಕ್ಕಾಗಿ ರಾಜ್ಯ ಮತ್ತು ದೇಶದ ಜನ ಹಾನಗಲ್ ನೋಡುವ ರೀತಿಯಲ್ಲಿ ಫಲಿತಾಂಶ ನೀಡಿದ್ದಾರೆ ಎಂದು ಜಿಲ್ಲೆಯ ಜನತೆಗೆ ಧನ್ಯವಾದ ಅರ್ಪಿಸಿದರು.
ಹರಕೆ ಪೂರ್ಣಗೊಳಿಸಿದ ನಂತರ ದೇವಸ್ಥಾನದ ಸಮೀಪದಲ್ಲಿದ್ದ ಕಾಶ್ಮೀರಿ ದರ್ಗಾಕ್ಕೆ ಭೇಟಿ ನೀಡಿದರು. ಈ ವೇಳೆ ನೂರಾರು ಕಾರ್ಯಕರ್ತರು ಜಮಾಯಿಸಿದ್ದರು.
ಇದನ್ನೂ ಓದಿ : ಹಾನಗಲ್ ಗೆಲುವು: ಹಾವೇರಿ ಜನತೆಗೆ ಡಿ.ಕೆ.ಶಿವಕುಮಾರ್ ಧನ್ಯವಾದ