ಹಾವೇರಿ: ಮುಂದಿನ ದಿನಗಳಲ್ಲಿ15 ಅನರ್ಹ ಶಾಸಕರು ಯಡಿಯೂರಪ್ಪನ ಪ್ಯಾಂಟ್ ಶರ್ಟ್ ಹರಿದು ಹಾಕುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಾಸೂರಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಡಿಕೆಶಿ ಮಾತನಾಡಿದ್ರು. ಈಗಾಗಲೇ ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಜನತಾದಳ ಹಾಗೂ ಕಾಂಗ್ರೆಸ್ ಅನ್ನು ಮುಗಿಸಿದ್ದಾರೆ. ಬರುವ ದಿನಗಳಲ್ಲಿ ಬಿಜೆಪಿಯನ್ನ ಸಹ ಮುಗಿಸುತ್ತಾರೆ ಎಂದು ಹೇಳಿದರು. ಸಿಎಂ ಯಡಿಯೂರಪ್ಪಗೆ ನೆರೆ ಹಾವಳಿಯಲ್ಲಿ ಕೇಂದ್ರದಿಂದ ಪರಿಹಾರ ತರಲು ಆಗಲಿಲ್ಲ. ಮಹದಾಯಿ ವಿಚಾರದಲ್ಲಿ ಹೋರಾಟ ಮಾಡಲು ಆಗಲಿಲ್ಲ. ಅವರಿಗೆ ಏತಕ್ಕಾಗಿ ಅಧಿಕಾರ ನೀಡಬೇಕು ಎಂದು ಶಿವಕುಮಾರ್ ಪ್ರಶ್ನಿಸಿದರು.
ಯಡಿಯೂರಪ್ಪ ಅಧಿಕಾರ ಬೇಕು, ಅಧಿಕಾರದಲ್ಲಿ ಮುಂದುವರಿಯಬೇಕು ಅಂತಿದ್ದಾರೆ. ಅವರು ತಮ್ಮ ಅಧಿಕಾರದಿಂದ ಕೇಂದ್ರದಲ್ಲಿ ಏನನ್ನು ಕೇಳಿಲ್ಲ ಎಂದು ಆರೋಪಿಸಿದರು.
ಮೊದಲು ಕುಮಾರಸ್ವಾಮಿ ದೇವೇಗೌಡರಿಗೆ ಕೈಕೊಟ್ಟರು. ಆ ಮೇಲೆ ಕಾಂಗ್ರೆಸ್ಗೆ ಕೈಕೊಟ್ಟರು ಈಗ ಬಿಜೆಪಿಗೆ ಹೋಗಿದ್ದಾರೆ. ಅಲ್ಲಿಗೆ ಯು.ಬಿ ಬಣಕಾರ ಕಥೆ ಮುಗಿದಂತಾಯಿತು ಎಂದು ಶಿವಕುಮಾರ್ ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್.ಕೆ.ಪಾಟೀಲ್, ರುದ್ರಪ್ಪ ಲಮಾಣಿ ಕಾಂಗ್ರೆಸ್ ಅಭ್ಯರ್ಥಿ ಬಿ.ಹೆಚ್.ಬನ್ನಿಕೋಡ್ ಸೇರಿದಂತೆ ವಿವಿಧ ಮುಖಂಡರು ಮತ್ತು ಜನಪ್ರತಿನಿಧಿಗಳು ಸಹಸ್ರಾರು ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.