ಹಾವೇರಿ : ಮಲೇಶಿಯಾದ ಕ್ವಾಲಾಲಂಪುರದಲ್ಲಿ ಜುಲೈ 29 ಮತ್ತು 30 ರಂದು ನಡೆದ ವಿಕಲಚೇತನರ ಸಿಟ್ಟಿಂಗ್ ಥ್ರೋಬಾಲ್ ಪಂದ್ಯಾವಳಿಯಲ್ಲಿ ಭಾರತ ಮಹಿಳಾ ಮತ್ತು ಪುರುಷ ತಂಡಗಳು ಗೆಲ್ಲುವ ಮೂಲಕ ಚಿನ್ನದ ಪದಕ ಬೇಟೆಯಾಡಿದ್ದಾರೆ. ಈ ಇಬ್ಬರು ಆಟಗಾರರು ಹಾವೇರಿ ಜಿಲ್ಲೆಯವರಾಗಿದ್ದು, ಮಹಿಳಾ ತಂಡವನ್ನು ಹಿರೇಕೆರೂರು ತಾಲೂಕಿನ ಬನ್ನಿಹಟ್ಟಿ ತಾಂಡಾದ ಮಂಜುಳಾ ಲಮಾಣಿ ಹಾಗು ಪುರುಷ ತಂಡವನ್ನು ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಹರೀಶ್ ಶಿವಣ್ಣನವರ್ ಮುನ್ನಡಿಸಿದ್ದರು.
ಮುಂಬರುವ ಪ್ಯಾರಾ ಏಷ್ಯನ್ ಗೇಮ್ಸ್ ಹಿನ್ನೆಲೆ ಸಿಟ್ಟಿಂಗ್ ಥ್ರೋಬಾಲ್ ಕ್ರೀಡೆಯನ್ನು ಪರಿಚಯಸಲು ಮಲೇಷ್ಯಾ ವಿಕಲಚೇತನರ ವಾಲಿಬಾಲ್ ಅಸೋಸಿಯೇಷನ್ ಮತ್ತು ಪ್ಯಾರಾ ತ್ರೋಬಾಲ್ ಫೆಡರೇಶನ್ ಆಫ್ ಇಂಡಿಯಾ ಈ ಪಂದ್ಯಗಳನ್ನು ಆಯೋಜಿಸಿದ್ದು, ಮಲೇಷ್ಯಾ-ಭಾರತ ಪ್ಯಾರಾ ತ್ರೋಬಾಲ್ ತರಬೇತಿ ಕಾರ್ಯಾಗಾರ ಹಾಗು ಜುಲೈ 29 ಮತ್ತು 30 ಎರಡು ದೇಶಗಳ ನಡುವೆ ಸಿಟ್ಟಿಂಗ್ ಥ್ರೋಬಾಲ್ ಸರಣಿಯ 5 ಪಂದ್ಯಗಳನ್ನು ಏರ್ಪಡಿಸಲಾಗಿತ್ತು. ಈ ಪಂದ್ಯಗಳಲ್ಲಿ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಭಾರತದ ಆಟಗಾರರು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಕ್ರೀಡಾಕೂಟ ಮತ್ತು ಕಾರ್ಯಾಗಾರದಲ್ಲಿ ಮಲೇಷಿಯನ್ ಸಿಟಿಂಗ್ ವಾಲಿಬಾಲ್ ಆಟಗಾರರು ಪಾಲ್ಗೊಂಡಿದ್ದರು.
ಕಾರ್ಯಾಗಾರದಲ್ಲಿ ಪ್ಯಾರಾ ಥ್ರೋಬಾಲ್, ಪ್ರಾಯೋಗಿಕ ಆಟಗಳು, ಸಿಮುಲೇಶನ್ ಪಂದ್ಯಗಳು ಮತ್ತು ಸ್ಪರ್ಧಾತ್ಮಕ ಪಂದ್ಯಗಳ ಪರಿಚಯವನ್ನು ಪ್ಯಾರಾಲಿಂಪಿಕ್ ಕೌನ್ಸಿಲ್ ಆಫ್ ಮಲೇಷ್ಯಾ ಮಾಡಿಸಿತು. ಈ ಕ್ರೀಡೆಯಲ್ಲಿ ಭಾರತದ ಪುರುಷ ತಂಡವು ಮಲೇಷ್ಯಾದ ಪುರುಷ ತಂಡದ ವಿರುದ್ದ ಅಧಿಕ 4 ಅಂಕ ಗಳಿಸುವ ಮೂಲಕ ವಿಜಯಮಾಲೆಯನ್ನು ತನ್ನದಾಗಿಸಿಕೊಂಡಿದೆ. ಅದೇ ರೀತಿ ಭಾರತದ ಮಹಿಳಾ ತಂಡವು ಮೂರು ಅಂಕಗಳನ್ನು ಅಧಿಕವಾಗಿ ಪಡೆಯುವ ಮೂಲಕ ಗೆಲುವು ಸಾಧಿಸಿದೆ. ಇನ್ನೊಂದೆಡೆ ಸಿಟ್ಟಿಂಗ್ ಥ್ರೋಬಾಲ್ ಕ್ರೀಡೆಗೆ ಆಯ್ಕೆಯಾದ ಬಹುತೇಕ ಆಟಗಾರರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು, ವೀಸಾ, ಪಾಸಪೋರ್ಟ್ ಸೇರಿದಂತೆ ವಿವಿಧ ಕಾರಣಗಳಿಗಾಗಿ ಖರ್ಚು ಭರಿಸಲು ಸಾಧ್ಯವಾಗದೆ ಪರದಾಟ ನಡೆಸುತ್ತಿದ್ದಾರೆ. ಈ ಕ್ರೀಡೆ ಸರ್ಕಾರದ ಮಾನ್ಯತೆ ಪಡೆಯದ ಕಾರಣ ಸರ್ಕಾರಗಳಿಂದ ಸಹ ಹೆಚ್ಚು ನೆರವು ಸಿಗುತ್ತಿಲ್ಲಾ ಎನ್ನುತ್ತಾರೆ ಕ್ರೀಡಾಪಟುಗಳು.
ಈ ಬಗ್ಗೆ ಮಾತನಾಡಿರುವ ವಿಕಲಚೇತನರ ಸಿಟ್ಟಿಂಗ್ ಥ್ರೋಬಾಲ್ ಚಿನ್ನದ ಪದಕ ವಿಜೇತೆ ಮಂಜುಳಾ ಲಮಾಣಿ ಅವರು, ಮಲೇಶಿಯಾದಲ್ಲಿ ನಡೆದ ವಿಕಲಚೇತನರ ಸಿಟ್ಟಿಂಗ್ ಥ್ರೋಬಾಲ್ ಪಂದ್ಯಾವಳಿ ಮಹಿಳಾ ಮತ್ತು ಪುರುಷ ತಂಡಗಳು ಗೆದ್ದಿದ್ದೇವೆ. ಮುಂಬರುವ ಪ್ಯಾರಾ ಏಷ್ಯಾನ್ ಗೇಮ್ಸ್ ಸಲುವಾಗಿ 9 ದೇಶಗಳು ಭಾಗಿಯಾಗುವ ಮೂಲಕ ಇದೆ ವರ್ಷದ ಕೊನೆ ತಿಂಗಳಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಪಂದ್ಯಾವಳಿಯನ್ನು ಚೆನ್ನೈನಲ್ಲಿ ಆಯೋಜನೆ ಮಾಡಲು ಸಿದ್ದತೆ ನಡೆದಿವೆ. ಹೀಗಾಗಿ ಎಲ್ಲರು ನಮ್ಮ ಜೊತೆ ಕೈ ಜೋಡಿಸಿ ಆರ್ಥಿಕ ಸಹಾಯ ಮಾಡವಂತೆ ಮನವಿ ಮಾಡಿದರು.
ಇದೇ ವೇಳೆ ಅಲೆಮಾರಿ ಮಹಾಸಭಾ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ ಅವರು ಮಾತನಾಡಿ ರಾಜ್ಯದ ಐವರು ಆಟಗಾರರು ದೇಶವನ್ನು ಪ್ರತಿನಿಧಿಸಿರುವುದು ಹೆಮ್ಮೆಯ ವಿಷಯ. ಮುಂದೆ ಚೆನ್ನೈನಲ್ಲಿ ನಡೆಯಲಿರುವ ಸಿಟ್ಟಿಂಗ್ ಥ್ರೋಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿಲು ಆಟಗಾರಿಗೆ ಆರ್ಥಿಕ ಸಮಸ್ಯೆ ಎದುರಾಗಿದೆ. ಆದರಿಂದ ರಾಜ್ಯ ಸರ್ಕಾರ ಆಟಗಾರರ ನೆರವಿಗೆ ಧಾವಿಸಿ, ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಒತ್ತಾಯಿಸಿದರು.
ಇದನ್ನೂ ಓದಿ : BWF ranking: ಬಿಡಬ್ಲ್ಯೂಎಫ್ ವಿಶ್ವ ಶ್ರೇಯಾಂಕದಲ್ಲಿ ಉತ್ತಮ ಏರಿಕೆ ಕಂಡ ಎಚ್‌ಎಸ್ ಪ್ರಣಯ್, ಲಕ್ಷ್ಯ ಸೇನ್