ಹಾವೇರಿ: ಜಿಲ್ಲೆಯ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ರೈತರ ಆತ್ಮಹತ್ಯೆಗಳ ಕುರಿತು ನೀಡಿರುವ ಹೇಳಿಕೆಯ ಬಗ್ಗೆ ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಮತ್ತು ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ್ ಸ್ಪಷ್ಟನೆ ನೀಡಿದರು. ಹಾವೇರಿಯಲ್ಲಿ ಮಾತನಾಡಿದ ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ, ಸಚಿವ ಶಿವಾನಂದ ಪಾಟೀಲ್ ಐದು ಲಕ್ಷ ರೂಪಾಯಿ ಪರಿಹಾರ ಹೆಚ್ಚು ಮಾಡಿದಾಗ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾದವು ಎಂದು ಹೇಳಿದ್ದರು. ಅವರು ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳುವುದು ಬೇಡ ಎಂದು ಧೈರ್ಯ ತುಂಬುವ ಕೆಲಸವನ್ನು ಶಿವಾನಂದ ಪಾಟೀಲ್ ಆ ರೀತಿಯಾ ಹೇಳಿಕೆ ನೀಡಿದ್ದರು. ಆದರೆ, ಅವರ ಹೇಳಿಕೆ ರೈತರು ದುಡ್ಡಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬಂತೆ ಕೆಲವರಿಗೆ ಅರ್ಥವಾಗಿದೆ. ಅವರು ಆ ಅರ್ಥದಲ್ಲಿ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಅಲ್ಲದೇ ಕೆಲ ರೈತ ಮುಖಂಡರು ಸಹ ಈ ಕುರಿತಂತೆ ನಮ್ಮನ್ನು ಕೇಳಿದಾಗ ಅವರಿಗೆ ಸ್ಪಷ್ಟನೆ ನೀಡಿದ್ದೇವೆ. ರೈತರು ಆತ್ಮಹತ್ಯೆಗೆ ಶರಣಾಗಬಾರದು ಎನ್ನುವ ದೃಷ್ಟಿಯಿಂದ ಸರ್ಕಾರ ರೈತರ ಪರವಾಗಿದೆ ಎಂದು ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ. ಈ ಕುರಿತಂತೆ ರೈತರು, ರೈತ ಮುಖಂಡರು ತಪ್ಪಾಗಿ ಅರ್ಥೈಸಿಕೊಂಡಿದ್ದು, ಸಚಿವರ ಮೇಲೆ ಆಕ್ರೋಶಗೊಂಡಿದ್ದಾರೆ. ಆದರೆ, ಸಚಿವರು ಆ ರೀತಿ ಹೇಳಿಲ್ಲ ಎಂದು ರುದ್ರಪ್ಪ ಲಮಾಣಿ ತಿಳಿಸಿದರು.
ರೈತರಿಗೆ ಚ್ಯುತಿ ಬರುವಂತೆ ಸಚಿವರು ಹೇಳಿಕೆ ನೀಡಿಲ್ಲ, ಸಚಿವರ ಹೇಳಿಕೆಯನ್ನ ನಾವು ಸಮರ್ಥನೆ ಮಾಡಿಕೊಳ್ಳುವುದಾಗಿ ರುದ್ರಪ್ಪ ಲಮಾಣಿ ಹೇಳಿದರು. ಅಂಕಿ - ಸಂಖ್ಯೆಗಳನ್ನು ನೋಡಿದರೆ ಹಾವೇರಿ ಜಿಲ್ಲೆಯಲ್ಲಿಯೇ ರೈತರು ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ತಿಳಿಸಿದ್ದರು. ಆದರೆ ರೈತ ಸಂಘಟನೆಗಳು ತಪ್ಪು ತಿಳಿದುಕೊಂಡರೇ ನಾವು ಏನು ಮಾಡಲಾಗುವುದಿಲ್ಲ. ರೈತರಿಗೆ ಅವಮಾನಕರವಾದ ರೀತಿಯಾಗಿ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಮಾತನಾಡಿದ ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ್, ಸಚಿವ ಶಿವಾನಂದ ಪಾಟೀಲ್ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ. ಹಾವೇರಿ ಜಿಲ್ಲೆ ರಾಜ್ಯದ ಉಳಿದ ಜಿಲ್ಲೆಗಳಿಗಿಂತ ವಿಭಿನ್ನವಾಗಿದೆ. ಜಿಲ್ಲೆ ಇರುವ ಭೌಗೋಳಿಕ ವ್ಯವಸ್ಥೆ ಈ ರೀತಿ ಇರುವುದರಿಂದ ಹಾವೇರಿ ಜಿಲ್ಲೆಯಲ್ಲಿ ಹೆಚ್ಚು ರೈತರ ಆತ್ಮಹತ್ಯೆಗಳಾಗುತ್ತವೆ ಎಂದು ತಿಳಿಸಿದರು.
ಇದನ್ನೂ ಓದಿ: ಕಾವೇರಿಗಾಗಿ ಭಿಕ್ಷಾ ಪಾತ್ರೆ ಹಿಡಿದು ರಕ್ಷಣಾವೇದಿಕೆಯಿಂದ ವಿಶೇಷ ಪ್ರತಿಭಟನೆ
ಸಚಿವ ಶಿವಾನಂದ ಪಾಟೀಲ್ ಹೇಳಿದ್ದೇನು?; ಇತ್ತೀಚಿಗೆ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಹಾವೇರಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಯ ಸಂಖ್ಯೆ ಹೆಚ್ಚಿದೆ. ಈ ಸಮಸ್ಯೆ ಇಂದು ನಿನ್ನೆಯದಲ್ಲ. ರೈತರ ಆತ್ಮಹತ್ಯೆಯ ನಿಖರ ಸಂಖ್ಯೆ ತಿಳಿಯಲು ಎಫ್ಎಸ್ಎಲ್ ವರದಿ ಬರುವವರೆಗೂ ಕಾಯಬೇಕು. 2020ರಲ್ಲಿ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2021ರಲ್ಲಿ 600ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2023ರಲ್ಲೂ 500ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸ್ ಎಫ್ಐಆರ್ನಲ್ಲಿ ರೈತ ಆತ್ಮಹತ್ಯೆ ಎಂದು ದಾಖಲಾದ ಕೂಡಲೇ ಅದನ್ನು ರೈತ ಆತ್ಮಹತ್ಯೆ ಎನ್ನುವುದು ತಪ್ಪು ಎಂದು ಹೇಳಿದ್ದರು.