ಹಾವೇರಿ: ಹಾವೇರಿ ಸೈಕ್ಲಿಂಗ್ ಕ್ಲಬ್ ಆಯೋಜಿಸಿದ್ದ ಸೈಕ್ಲೋತ್ಸವಕ್ಕೆ ಭಾನುವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀಗಳು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಕ್ರೀಡಾಂಗಣದಿಂದ ಆರಂಭವಾದ ಸೈಕ್ಲೋತ್ಸವದಲ್ಲಿ ಹಾವೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಐನೂರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಪ್ರಸ್ತುತ ದಿನಗಳಲ್ಲಿ ನಮ್ಮ ಜೀವನಶೈಲಿ ಹಾಗೂ ಆಹಾರ ಶೈಲಿಯಿಂದ ನಾವು ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಈ ಸಮಸ್ಯೆಗಳಿಗೆ ಪೆಡ್ಲಿಂಗ್ ಸ್ವಲ್ಪವಾದರೂ ಸಹಾಯವಾಗುತ್ತದೆ ಎಂದು ಸೈಕ್ಲೋತ್ಸವವನ್ನು ಆಯೋಜಿಸಲಾಗಿದೆ ಎಂದು ಸೈಕ್ಲಿಂಗ್ ಕ್ಲಬ್ ಅಧ್ಯಕ್ಷ ಎಂ.ಆರ್.ರಾವ್ ತಿಳಿಸಿದರು.
ಕ್ರೀಡಾಂಗಣದಿಂದ ಆರಂಭವಾದ ಸೈಕ್ಲೋತ್ಸವ ಹುಕ್ಕೇರಿಮಠ ಕೆಇಬಿ ಮತ್ತು ಜಿಹೆಚ್ ಕಾಲೇಜು ಸೇರಿದಂತೆ 15 ಕಿ.ಮೀ.ವರೆಗೆ ಆಯೋಜಿಸಲಾಗಿತ್ತು. ನಂತರ ಕ್ರೀಡಾಂಗಣಕ್ಕೆ ಆಗಮಿಸುವ ಮೂಲಕ ಸೈಕ್ಲೋತ್ಸವಕ್ಕೆ ತೆರೆ ಬಿತ್ತು. ಸೈಕ್ಲೋತ್ಸವದಲ್ಲಿ ಪಾಲ್ಗೊಂಡವರಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಆರೋಗ್ಯಕರ ಜೀವನಕ್ಕೆ ಸೈಕ್ಲೋತ್ಸವ ಸಹಕಾರಿಯಾಗಿದ್ದು, ನಿತ್ಯ ಸೈಕ್ಲಿಂಗ್ ಮಾಡುವ ಇಂಗಿತವನ್ನ ಸೈಕ್ಲಿಂಗ್ ಪ್ರೇಮಿಗಳು ವ್ಯಕ್ತಪಡಿಸಿದರು.
ಸೈಕ್ಲೋತ್ಸವದಲ್ಲಿ ಹಾವೇರಿ ಎಸ್ಪಿ ಹನುಮಂತರಾಯ, ಎಎಸ್ಪಿ ವಿಜಯಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.