ಹಾವೇರಿ: ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ರೈತರು ಮಳೆ, ಮಳೆ ಎಂದು ಗಗನದೆಡೆ ಮುಖ ಮಾಡಿದ್ದಾರೆ. ಆದರೆ ಮಳೆರಾಯನ ಮುನಿಸು ಮಾತ್ರ ಕಡಿಮೆಯಾಗಿಲ್ಲ. ಆದರೆ ಇಲ್ಲೊಬ್ಬ ರೈತ ಜಮೀನಿನಲ್ಲಿದ್ದ ನೀರನ್ನು ಬೇರೆಡೆ ಸಾಗಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದ ದ್ಯಾಮಪ್ಪ ತಿಮ್ಮಪ್ಪ ಐಗಳ ಅವರ ಅಳಲು ಇದು.
ಈ ರೈತ ಸುಮಾರು 9 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ಬೆಳೆ ಚೆನ್ನಾಗಿ ಬಂದಿದೆ. ಮೆಕ್ಕೆಜೋಳ ತೆನೆ ಬಿಡುವ ವೇಳೆಗೆ ಪಕ್ಕದಲ್ಲಿನ ತುಂಗಾ ಮೇಲ್ದಂಡೆ ಕಾಲುವೆಯಿಂದ ಇತನ ಜಮೀನಿಗೆ ನೀರು ಬರಲಾರಂಭಿಸಿದೆ. ಪರಿಣಾಮ ತೆನೆಗಳು ಜೊಳ್ಳುಜೊಳ್ಳಾಗಿವೆ. 9 ಎಕರೆ ಜಮೀನಿನಲ್ಲಿ ನೀರು ನಿಂತಿದ್ದು ಗೋವಿನಜೋಳದ ರವದಿ ಕೊಳೆಯಲಾರಂಭಿಸಿದೆ.
ಎಕರೆಗೆ 40 ಸಾವಿರ ರೂಪಾಯಿ ಖರ್ಚು ಮಾಡಿ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತಿದ್ದೆ. ಬೆಳೆ ಚೆನ್ನಾಗಿ ಬಂದಿತ್ತು. ಒಳ್ಳೆಯ ಸಮಯಕ್ಕೆ ತೆನೆಯೂ ಒಡೆಯಲಾರಂಭಿಸಿತ್ತು. ಅಷ್ಟರಲ್ಲಿ ಪಕ್ಕದಲ್ಲಿ ಹಾದುಹೋಗಿರುವ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಯಲ್ಲಿ ಭದ್ರಾ ಜಲಾಶಯದಿಂದ ನೀರು ಬಿಟ್ಟಿದ್ದಾರೆ. ಇದರಿಂದ ತಗ್ಗಿನ ದ್ಯಾಮಪ್ಪ ಅವರ ಜಮೀನು ನೀರಿನಲ್ಲಿ ನಿಂತಿದೆ.
ದ್ಯಾಮಪ್ಪನವರ ಜಮೀನಿಗಿಂತ ಎತ್ತರದಲ್ಲಿರುವ ರೈತರು ಅಧಿಕಾರಿಗಳಿಂದ ಪರಿಹಾರಧನ ಪಡೆದಿದ್ದಾರೆ. ಆದರೆ ನಿಜವಾಗಿ ಸಮಸ್ಯೆ ಇರುವ ರೈತ ದ್ಯಾಮಪ್ಪರಿಗೆ ಮಾತ್ರ ಯಾವುದೇ ಪರಿಹಾರ ಬಂದಿಲ್ಲ. ಈ ಕುರಿತಂತೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಯುಟಿಪಿ ಕಚೇರಿಗೆ ಅಲೆದೂ ಅಲೆದು ಸಾಕಾಗಿದೆ. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ದ್ಯಾಮಪ್ಪ ಅಳಲು ತೋಡಿಕೊಂಡಿದ್ದಾರೆ.
ಯುಟಿಪಿ ಕಾಲುವೆಯಿಂದ ರೈತರಿಗೆ ಲಾಭಕ್ಕಿಂತ ಹಾನಿಯೇ ಹೆಚ್ಚು. ಇದ್ದ ಜಮೀನು ಕಳೆದುಕೊಂಡಿದ್ದೇವೆ. ಕೆಲ ರೈತರಿಗೆ ಪರಿಹಾರ ಸಹ ಸಿಕ್ಕಿಲ್ಲ. ಇನ್ನೂ ಕೆಲವೆಡೆ ಚಿಕ್ಕಕಾಲುವೆ ಸಹ ನಿರ್ಮಿಸಿಲ್ಲ. ಎಲ್ಲೆಂದರಲ್ಲಿ ಕಾಲುವೆ ಬಿರುಕು ಬಿಟ್ಟಿದ್ದು ರೈತರ ಜಮೀನಿಗೆ ಕಾಲುವೆ ನೀರು ನುಗ್ಗುತ್ತಿದೆ. ಕೆಲವು ಕಡೆ ಜವುಗು ಹಿಡಿದಿದೆ. ಅಧಿಕಾರಿಗಳು ಕಾಲುವೆ ಕಸ ತೆಗೆಯದ ಕಾರಣ ಕಾಲುವೆ ಬಿರುಕು ಬಿಟ್ಟು ಜಲಾಶಯದಿಂದ ನೀರು ಬಿಟ್ಟಾಗ ರೈತರ ಜಮೀನುಗಳಿಗೆ ನುಗ್ಗುತ್ತೆ. ಹೀಗಾದರೆ ರೈತರು ಹೇಗೆ ಬದುಕಬೇಕು ಹೇಳಿ? ಎಂದು ಅಸಹಾಯಕತೆಯಿಂದ ದ್ಯಾಮಪ್ಪ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಚಿಕ್ಕೋಡಿ: ಸೋಷಿಯಲ್ ಮೀಡಿಯಾದ ವಿಡಿಯೋ ನೋಡಿ ಬಂಗಾರದಂಥ ಬೆಳೆ ಬೆಳೆದ ದಂಪತಿ