ಹಾವೇರಿ: ಜಿಲ್ಲೆಯ ಅನ್ನದಾತರು ಅಕ್ಷರಶಃ ಕಂಗಾಲಾಗಿದ್ದಾರೆ. ಒಂದೆಡೆ, ಮಳೆರಾಯನ ಆರ್ಭಟದಿಂದ ಮುಂಗಾರಿನಲ್ಲಿಯೇ ಎರಡು ಮೂರು ಬಾರಿ ಬಿತ್ತನೆ ಮಾಡಿ ಅಧಿಕ ಹಣ ಖರ್ಚು ಮಾಡಿದ್ದಾರೆ. ಇನ್ನೊಂದೆಡೆ, ಫಸಲು ಕೈಗೆ ಸಿಕ್ಕಿತು ಎನ್ನವಷ್ಟರಲ್ಲಿ ವರುಣನ ಆರ್ಭಟಕ್ಕೆ ಬೆಳೆ ನೆಲಕಚ್ಚಿದೆ.
ಹೌದು, ಹತ್ತಿ, ಮೆಕ್ಕೆಜೋಳ, ಶೇಂಗಾ, ಸೋಯಾಬೀನ್ ಸೇರಿದಂತೆ ವಿವಿಧ ಬೆಳೆಗಳು ಮಳೆಗೆ ಸಿಲುಕಿ ಹಾಳಾಗಿವೆ. ದನಕರುಗಳಿಗೆ ಸಹ ಚರ್ಮ ಗಂಟುರೋಗ ಕಾಣಿಸಿಕೊಂಡಿದ್ದು, ರೈತರನ್ನ ಹೈರಾಣಾಗಿಸಿದೆ. ಈ ಮಧ್ಯೆ ಸರ್ಕಾರದ ಬೆಳೆಹಾನಿ ಪರಿಹಾರ ಸಹ ಅನ್ನದಾತರ ಕೈ ಸೇರಿಲ್ಲ.
ಹೆಕ್ಟೇರ್‌ಗೆ 13,500 ರೂಪಾಯಿ ಬೆಳೆ ಹಾನಿ ಘೋಷಿಸಿ ಸರ್ಕಾರ ಆದೇಶಿಸಿದೆ. ಆದರೆ, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದಲ್ಲಿ ಸರ್ಕಾರದ ಪರಿಹಾರ ರೈತರಿಗೆ ಸಿಕ್ಕಿಲ್ಲ. ಇದಕ್ಕೆ ಕಾರಣ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಬಾರದಿರುವುದೇ ಎನ್ನುತ್ತಿದ್ದಾರೆ ಗ್ರಾಮಸ್ಥರು.
ಇದನ್ನೂ ಓದಿ: ಸಮೀಕ್ಷಾ ವರದಿ ಬರುತ್ತಿದ್ದಂತೆ ಬೆಳೆ ಹಾನಿ ಪರಿಹಾರ ವಿತರಣೆ: ಸಿಎಂ ಬೊಮ್ಮಾಯಿ ಅಭಯ
ಮೇಲ್ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಾರದೇ ಕೈ ಕೆಳಗಿನ ಸಹಾಯಕರನ್ನ ಜಿಪಿಎಸ್ ಮಾಡಲು ಕಳುಹಿಸಿದ್ದಾರೆ. ಅವರು ಸರಿಯಾಗಿ ಜಿಪಿಎಸ್ ಮಾಡದೇ ಯಾರದ್ದೂ ಜಮೀನಿಗೆ ಬೇರೆಯವರನ್ನ ಮಾಲೀಕರನ್ನಾಗಿ ಮಾಡಿದ್ದಾರೆ. ಇದರಿಂದಾಗಿ, ಕಡಿಮೆ ಹಾಳಾದ ರೈತರಿಗೆ ಅಧಿಕ ಪರಿಹಾರ ಸಿಕ್ಕಿದೆ. ಹೆಚ್ಚು ಬೆಳೆ ಹಾಳಾದ ರೈತರಿಗೆ ಕಡಿಮೆ ಪರಿಹಾರ ಸಿಕ್ಕಿದೆ. ಇನ್ನು ಕೆಲ ರೈತರಿಗೆ ಪರಿಹಾರವೇ ಬಂದಿಲ್ಲ. ಇದರಿಂದಾಗಿ ದಿನನಿತ್ಯ ಬ್ಯಾಂಕ್‌ಗೆ ಮತ್ತು ತಹಶೀಲ್ದಾರ್ ಕಚೇರಿಗೆ ಅಲೆದಾಡುವುದೇ ಕಾಯಕವಾಗಿದ್ದು, ಇದಕ್ಕೆಲ್ಲಾ ಕಂದಾಯ ಅಧಿಕಾರಿಗಳೇ ಕಾರಣ ಎಂದು ರೈತರು ಆರೋಪಿಸಿದ್ದಾರೆ.
ಇದನ್ನೂ ಓದಿ: ಬಡ ರೈತರಿಗೆ ಬೆಳೆ ಪರಿಹಾರ ಸಿಗದಿದ್ದರೆ ತೋಟಗಾರಿಕೆ ಇಲಾಖೆಗೆ ಬೀಗ: ರೈತರ ಎಚ್ಚರಿಕೆ
ಮುಂಗಾರು ಮಳೆ ಮುಗಿದು ಹಿಂಗಾರು ಬೆಳೆ ಬಿತ್ತನೆಗೆ ಸಹ ಮಳೆರಾಯ ಪುರಸೊತ್ತು ನೀಡುತ್ತಿಲ್ಲ. ಇತ್ತ ಮುಂಗಾರು ಬೆಳೆ ಕೊಯ್ಲಿಗೆ ಸಹ ಮಳೆ ಬಿಡುತ್ತಿಲ್ಲ. ಮಳೆರಾಯ ರೈತರನ್ನ ಒಂದು ರೀತಿ ಕಾಡಿದರೆ ಅಧಿಕಾರಿಗಳು ಇನ್ನೊಂದು ರೀತಿ ಕಾಡುತ್ತಿದ್ದಾರೆ. ಇವುಗಳ ನಡುವೆ ವಕ್ಕರಿಸಿಕೊಂಡ ಚರ್ಮ ಗಂಟುರೋಗ ಜಾನುವಾರುಗಳನ್ನ ಕಾಡುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರೈತರ ನೆರವಿಗೆ ಬರಬೇಕು ಎಂದು ಅನ್ನದಾತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬೆಳೆಹಾನಿ ಪರಿಹಾರ ಜಮೆ ಆಯ್ತಾ ಅಥವಾ ಇಲ್ವಾ? ಹೀಗೆ ಚೆಕ್ ಮಾಡಿ..