ಹಾವೇರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದೆ. ಈ ಹಿನ್ನೆಲೆ ಜಿಲ್ಲಾಡಳಿತ ಹಾವೇರಿ ತಾಲೂಕಿನ ಬಸಾಪುರದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯುತ್ತಿದೆ ಎಂದು ಜಿಲ್ಲಾಧಿಕಾರಿ ಸಂಜಯ್ ಶೆಟ್ಟಣ್ಣವರ್ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವಶ್ಯಕತೆ ಬಿದ್ದರೆ ರಾಣೆಬೆನ್ನೂರು ತಾಲೂಕಿನಲ್ಲೂ ಸಹ ಕೋವಿಡ್ ಕೇರ್ ಸೆಂಟರ್ ಆರಂಭಿಸುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಯಾವುದೇ ಕೊರತೆ ಇಲ್ಲ. 500ಕ್ಕೂ ಅಧಿಕ ಆಮ್ಲಜನಕ ಹೊಂದಿರುವ ಬೆಡ್‌ಗಳಿವೆ. ಆಮ್ಲಜನಕ ಪೂರೈಕೆ ಮತ್ತು ಕೊರೊನಾ ಪೀಡಿತರಿಗೆ ನೀಡುವ ಪೆಮಾಶೆಡ್ವಿರ್ ಔಷಧಿ ಸೇರಿದಂತೆ ಎಲ್ಲ ಸೌಲಭ್ಯಗಳ ನೀಡುವಿಕೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಈವರೆಗೆ 1 ಲಕ್ಷ 12 ಸಾವಿರ ಜನರು ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದು, ಬೇಡಿಕೆಗೆ ತಕ್ಕಂತೆ ಬೆಳಗಾವಿಯಿಂದ ಲಸಿಕೆ ಪೂರೈಕೆಯಾಗುತ್ತಿದೆ. ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಕುರಿತ ವದಂತಿಗಳಿಗೆ ಜನರು ಕಿವಿಗೊಡಬಾರದು. ಕೋವಿಡೇತರ ರೋಗಿಗಳಿಗಾಗಿ ಇ-ಸಂಜೀವಿನಿ ಆ್ಯಪ್ ತರಲಾಗಿದ್ದು, ಜನರು ಅದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಕರೆ ನೀಡಿದರು.