ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಣವಿಸಿದ್ಗೇರಿ ಗ್ರಾಮದ ಕೊರೊನಾ ಪೀಡಿತ ವ್ಯಕ್ತಿ ನಾಪತ್ತೆಯಾಗಿದ್ದು, ಈವರೆಗೆ ಆತನ ಸುಳಿವು ಸಿಕ್ಕಿಲ್ಲ.
ಘಟನೆ ಹಿನ್ನೆಲೆ: ತಾಲೂಕಿನ ಆರೋಗ್ಯಾಧಿಕಾರಿಗಳು, 'ನಿನಗೆ ಕೊರೊನಾ ಪಾಸಿಟಿವ್ ಇದೆ. ಹೀಗಾಗಿ ನಿನ್ನನ್ನು ಆಸ್ಪತ್ರೆಗೆ ಸೇರಿಸಲು ಆ್ಯಂಬುಲೆನ್ಸ್ ಕಳಿಸುತ್ತಿದ್ದೇವೆ' ಎಂದು ಕರೆ ಮಾಡಿ ತಿಳಿಸಿದ್ದಾರೆ. ಇದರಿಂದ ಭಯಭೀತನಾಗಿರುವ ಯುವಕ ಮೊಬೈಲ್ ಒಡೆದುಹಾಕಿ ಪರಾರಿಯಾಗಿದ್ದಾನೆ.
ಕೊರೊನಾ ಪೀಡಿತ ನಾಪತ್ತೆಯಾಗಿರುವುದು ರಟ್ಟಿಹಳ್ಳಿ ತಾಲೂಕಿನ ಗ್ರಾಮಸ್ಥರಲ್ಲಿ ಇದೀಗ ಆತಂಕಕ್ಕೆ ಕಾರಣವಾಗಿದೆ. ಈ ಕುರಿತಂತೆ ತಾಲೂಕಿನ ಪೊಲೀಸ್ ಠಾಣೆಯಲ್ಲಿ ಈಗಾಗಲೇ ದೂರು ದಾಖಲಾಗಿದ್ದು, 29 ವರ್ಷದ ಯುವಕನಾಗಿರುವ ಕೊರೊನಾ ಸೋಂಕಿತನ ಪತ್ತೆಗೆ ಜಾಲ ಬೀಸಲಾಗಿದೆ. ಆದಷ್ಟು ಬೇಗ ಸೋಂಕಿತನ ಪತ್ತೆ ಹಚ್ಚಿ ಕೋವಿಡ್ ಆಸ್ಪತ್ರೆಗೆ ಸೇರಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.