ರಾಣೆಬೆನ್ನೂರು: ಪ್ರತಿಷ್ಠಿತ ಕಂಪನಿಯ ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸುವ ಮೂಲಕ ಕೊರೊನಾ ಸೋಂಕಿನ ಬಗ್ಗೆ ಕಾರ್ಮಿಕರಿಗೆ ಜಾಗೃತಿ ಮೂಡಿಸಲಾಗ್ತಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕವಲೆತ್ತು ಗ್ರಾಮದಲ್ಲಿರುವ ಸಿರಿಗನ್ನಡ ಶಾಲೆಯ ಕಲಾಶಿಕ್ಷಕ ರಾಘವೇಂದ್ರ ನಾಯಕ ಕುಮಾರಪಟ್ಟಣಂ ಗ್ರಾಮದಲ್ಲಿರುವ ಆದಿತ್ಯ ಬಿರ್ಲಾ ಒಡೆತನದ 'ಗ್ರಾಸಿಂ' ಕಾರ್ಖಾನೆಯ ಗೋಡೆಗಳ ಮೇಲೆ ಕೋವಿಡ್ ಜಾಗೃತಿ ಮೂಡಿಸುವ ಚಿತ್ರಗಳನ್ನು ಬಿಡಿಸಿದ್ದಾರೆ.
ಕೊರೊನಾ ಸೋಂಕು ಹಿನ್ನೆಲೆ ಇಡೀ ದೇಶವೇ ಲಾಕ್ಡೌನ್ ಆದ್ದರಿಂದ ಬಹುತೇಕ ಎಲ್ಲಾ ಕಂಪನಿಗಳನ್ನು ಮುಚ್ಚಲಾಗಿತ್ತು. ನಂತರ ಲಾಕ್ಡೌನ್ ಸ್ವಲ್ಪ ಸಡಿಲಗೊಂಡ ನಂತರ ಪುನಃ ಕಾರ್ಖಾನೆಗಳು ತೆರೆದಿವೆ. ಇಂತಹ ಸಮಯದಲ್ಲಿ ಕಾರ್ಮಿಕರಿಗೆ ಅರಿವು ಮತ್ತು ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕುರಿತು ಕಾರ್ಖಾನೆಗಳು ಕಾಳಜಿ ವಹಿಸುತ್ತಿವೆ. ಗ್ರಾಸಿಂ ಕಂಪನಿಯ ಮುಖ್ಯಸ್ಥರಾದ ಅಜೇಯ ಗುಪ್ತಾ ಅವರ ನಿರ್ದೇಶನದ ಮೇರೆಗೆ ಕಂಪನಿಯ ಗೋಡೆಗಳ, ಕಾರ್ಮಿಕರ ಕೊಠಡಿ, ವಿಶ್ರಾಂತಿ ಗೃಹ, ಕ್ಯಾಂಟಿನ್ ಸೇರಿ ಮುಂತಾದ ಸ್ಥಳಗಳಲ್ಲಿ ಮಾಸ್ಕ್ ಧರಿಸುವಿಕೆ, ಹ್ಯಾಂಡ್ ವಾಶ್, ಸಾಮಾಜಿಕ ಅಂತರದಂತಹ ವರ್ಣಮಯ ಚಿತ್ರಗಳನ್ನು ಬಿಡಿಸಲಾಗಿದೆ.
ಈ ಬಗ್ಗೆ ಕಂಪನಿಯ ಮುಖ್ಯಸ್ಥರಾದ ಅಜೇಯ ಗುಪ್ತಾ ಮಾತನಾಡಿ, ದೇಶದಲ್ಲಿ ಅಗೋಚರ ಸೂಕ್ಷ್ಮಾಣು ಜೀವಿಯೊಂದು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಹೀಗಾಗಿ ಜನಸಾಮಾನ್ಯರ ಸುರಕ್ಷತೆಯಂತೆ ಕಂಪನಿಯ ಕಾರ್ಮಿಕರ ಸುರಕ್ಷತೆಗೂ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಅಲ್ಲದೆ ಕಂಪನಿಯ ಅಕ್ಕಪಕ್ಕದ ಎಲ್ಲಾ ಗ್ರಾಮದ ಸಾರ್ವಜನಿಕರ ಆರೋಗ್ಯದ ಬಗ್ಗೆ ಸಹ ಕಾರ್ಖಾನೆ ಕಾಳಜಿ ವಹಿಸಿದೆ ಎಂದರು.