ಹಾವೇರಿ: ಕಟು ಸತ್ಯವನ್ನ ನುಡಿಯುವಂತಹ ಶರಣ, ನಿಜ ಶರಣರು ಅಂಬಿಗರ ಚೌಡಯ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಹಾವೇರಿಯ ನರಸೀಪುರದ ನಿಜಶರಣ ಅಂಬಿಗ ಚೌಡಯ್ಯ 903ನೇ ಜಯಂತೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕಠೋರವಾದ ಸತ್ಯವನ್ನ ಕಟುವಾಗಿ ಸಮಾಜಕ್ಕೆ ಹೇಳುತ್ತಿದ್ದ ಶರಣ ಅಂದರೆ ಅದು ಅಂಬಿಗರ ಚೌಡಯ್ಯ ಎಂದು ಸಿಎಂ ಬೊಮ್ಮಾಯಿ ಬಣ್ಣಿಸಿದರು.
ಬಸವಣ್ಣನವರು ಅಂಬಿಗರ ಚೌಡಯ್ಯ ಅವರಿಗೆ ನಿಜ ಶರಣ ಎಂದಿದ್ದರು: 12ನೇ ಶತಮಾನದಲ್ಲಿ ಬಹುತೇಕ ಶರಣರನ್ನ ಶಿವ ಶರಣರು ಎಂದು ಕರೆಯುತ್ತಾರೆ. ಆದರೆ ಬಸವಣ್ಣನವರು ಅಂಬಿಗರ ಚೌಡಯ್ಯರಿಗೆ ನಿಜ ಶರಣ ಎಂದು ಕರೆದಿದ್ದರು. ಈ ರೀತಿ ಕರೆಯಲು ಕಾರಣ ಬಸವಣ್ಣನವರಿಗೆ ಕಲ್ಯಾಣ ಕ್ರಾಂತಿಯಾಗುತ್ತೆ ಎಂದು ಮೊದಲೇ ಅಂಬಿಗರ ಚೌಡಯ್ಯ ಹೇಳಿದ್ದರು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ವೈಚಾರಿಕ ಕ್ರಾಂತಿಯಾದಾಗ ವಚನಗಳ ರಕ್ಷಣೆ ಕಾರ್ಯ ಮಾಡಬೇಕಾಗುತ್ತೆ ಎಂದು ಚೌಡಯ್ಯ ತಿಳಿಸಿದ್ದರು. ಕಲ್ಯಾಣ ಕ್ರಾಂತಿ ಆದಾಗ ದುಷ್ಟ ಶಕ್ತಿಗಳು ವಚನ ಗ್ರಂಥಗಳನ್ನ ಸುಡಲು ಮುಂದಾದಾಗ ಅವುಗಳನ್ನ ರಕ್ಷಿಸಿದವರು ಅಂಬಿಗರ ಚೌಡಯ್ಯ. ತಮ್ಮ ತೆಪ್ಪದಲ್ಲಿ ಅವುಗಳೆನ್ನೆಲ್ಲಾ ರಕ್ಷಿಸಿ ಉಳಿಸಿದರು ಎಂದು ಸಿಎಂ ಬಸವರಾಜ ಬೊಮ್ಮಾಯಿ ನೆನೆದರು.
ನಾನು ಸಹ ಗಂಗಾಪುತ್ರ: ಭೂಮಂಡಲದ ಬದುಕನ್ನ ದಡ ಸೇರಿಸುವವರು ಅಂಬಿಗ ಸಮುದಾಯದವರು, ನೀವೆಲ್ಲಾ ಯಾವ ರೀತಿ ಗಂಗಾಮಾತೆಯ ಮಕ್ಕಳು ನಾನು ಸಹ ಗಂಗಾಪುತ್ರ. ಏಕೆಂದರೆ ನನ್ನ ತಾಯಿಯ ಹೆಸರು ಗಂಗಮ್ಮ ಎಂದರು. ತಾಯಿಯ ಆಶೀರ್ವಾದ ಬಹುದೊಡ್ಡದು. ಅವಳ ಆಶೀರ್ವಾದದಲ್ಲಿ ದೊಡ್ಡ ಶಕ್ತಿ ಇದೆ. ಸಾತ್ವಿಕ ಚಿಂತನೆಯ ದೊಡ್ಡ ಶಕ್ತಿ ತಾಯಿಯ ಆಶೀರ್ವಾದದಲ್ಲಿದೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.
ಕೇಂದ್ರದ ಟ್ರೈಬಲ್ ಸಚಿವರನ್ನ ಎರಡು ಬಾರಿ ಭೇಟಿ ಮಾಡಿದ್ದೇವೆ: ಅಂಬಿಗ ಸಮಾಜದ ಆಶೋತ್ತರಗಳು ಸಹಜವಾಗಿ ಹೆಚ್ಚಾಗಿದ್ದು, ಅವಗಳಿಗೆ ಸ್ಪಂದಿಸುವ ಕೆಲಸವನ್ನ ಸರ್ಕಾರ ಮಾಡಬೇಕಿದೆ. ಅಂಬಿಗ ಸೇರಿದಂತೆ ಅದರ ವಿವಿಧ ಪಂಗಡಗಳನ್ನ ಎಸ್ಟಿಗೆ ಸೇರಿಸುವ ಬಗ್ಗೆ ರೇಜಿಸ್ಟರ್ ಜನರಲ್ ಆಫ್ ಇಂಡಿಯಾದ ಫೈಲ್ನಲ್ಲಿದೆ. ಈ ಕುರಿತಂತೆ ಕೇಂದ್ರದ ಟ್ರೈಬಲ್ ಸಚಿವರನ್ನ ಎರಡು ಬಾರಿ ಭೇಟಿ ಮಾಡಿದ್ದೇವೆ. ಅಲ್ಲಿಂದ ಆದೇಶ ಬಂದ ತಕ್ಷಣ ರಾಜ್ಯ ಸಚಿವ ಸಂಪುಟ ಅದಕ್ಕೆ ಅನುಮೋದನೆ ನೀಡುತ್ತೇವೆ ಎಂದರು.
ಈ ಕುರಿತಂತೆ ಮತ್ತೆ ಯತ್ನ ನಡೆಸುತ್ತೇನೆ. ಆದಷ್ಟು ಬೇಗ ಅಂತಿಮ ಚರಣದಲ್ಲಿರುವ ಎಸ್ಟಿ ಸೇರ್ಪಡೆಯನ್ನ ಪೂರ್ಣ ಚರಣ ಮಾಡುವುದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದರು. ನಾನು ಶಾಸಕನಾಗಿ ಸಚಿವನಾಗಿ ಸಿಎಂ ಆಗಿ ಕ್ಷೇತ್ರಕ್ಕೆ ಬಂದಿದ್ದೇನೆ. ಇಲ್ಲಿ ನಿಮಿತ್ತ ಮಾತ್ರ, ನಾನು ಗಂಗಾಮತ ಮಠದ ಖಾಯಂ ಭಕ್ತ ಎಂದು ಬೊಮ್ಮಾಯಿ ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನ ನಿಜಶರಣ ಅಂಬಿಗರ ಚೌಡಯ್ಯ ಪೀಠದ ಶಾಂತಭೀಷ್ಮಶ್ರೀಗಳು ಮತ್ತು ಶಿರಹಟ್ಟಿ ಫಕ್ಕೀರೇಶ್ವರಮಠದ ದಿಂಗಾಲೇಶ್ವರ ಸೇರಿದಂತೆ ವಿವಿಧ ಮಠಾಧೀಶರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಚಿವರಾದ ಬಿ.ಸಿ.ಪಾಟೀಲ್, ಸಿ.ಸಿ.ಪಾಟೀಲ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಶಾಸಕರು, ಮಾಜಿ ಶಾಸಕರು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ದೋಣಿಗೆ ಹುಟ್ಟು ಹಾಕುವ ಮೂಲಕ ಚಾಲನೆ ನೀಡಿದ್ದು ಗಮನ ಸೆಳೆಯಿತು.
ಇದನ್ನೂ ಓದಿ:'ಸಿಎಂ ಜೊತೆ ಇನ್ನು ಮಾತಾಡಲ್ಲ, ಏನಿದ್ದರೂ ಪಿಎಂ, ಕೇಂದ್ರ ಸಚಿವರ ಮಧ್ಯಸ್ಥಿಕೆಯಲ್ಲಿ ಪರಿಹಾರ'