ಹಾವೇರಿ: ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದೆ. ಅದರಂತೆ ಸಿಎಂ ಬೊಮ್ಮಾಯಿ ಅವರು ತಮ್ಮ ಮಾವನ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಉಪಚುನಾವಣೆಗೆ ಹಿನ್ನೆಲೆಯಲ್ಲಿ ಎಲ್ಲ ಪಕ್ಷದವರು ದೊಡ್ಡ ಮಟ್ಟದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದರು. ಅದರಂತೆ ಬಿಜೆಪಿಯೂ ಈ ಕಾರ್ಯದಲ್ಲಿ ನಿರತವಾಗಿದೆ. ಖುದ್ದು ಸಿಎಂ ಬೊಮ್ಮಾಯಿ ಅವರು ಅಖಾಡಕ್ಕಿಳಿದು ಪ್ರಚಾರ ಮಾಡುತ್ತಿದ್ದಾರೆ. ಇಂದು ಮುಖ್ಯಮಂತ್ರಿಗಳು ಹಾನಗಲ್ ತಾಲೂಕಿನ ಅಕ್ಕಿ ಆಲೂರ ಪಟ್ಟಣದ ಹಳ್ಳೂರ ಓಣಿಯಲ್ಲಿರುವ ಪತ್ನಿಯ ತವರು ಮನೆಗೆ ಭೇಟಿ ನೀಡಿದ್ದರು.
ಸಿಎಂ ಆದ ಬಳಿಕ ಬಸವರಾಜ ಬೊಮ್ಮಾಯಿ ಅವರು ಮೊದಲ ಬಾರಿಗೆ ಮಾವನ ಮನೆಗೆ ಭೇಟಿ ನೀಡಿದ್ದರು. ಮನೆಗೆ ಬಂದ ಅಳಿಯನಿಗೆ ಆರತಿ ಬೆಳಗಿ, ಹೂಗುಚ್ಛ ನೀಡಿ ಬೀಗರು ಸ್ವಾಗತಿಸಿದರು.
ಬಳಿಕ ಸಿಎಂ ಮಂಡಕ್ಕಿ, ಮಿರ್ಚಿ ಮತ್ತು ಚಹಾ ಸೇವಿಸಿ ಮನೆಯಲ್ಲಿದ್ದ ಸಂಬಂಧಿಕರ ಕುಶಲೋಪಚರಿ ವಿಚಾರಿಸಿ, ಫೋಟೋ ತೆಗೆಸಿಕೊಂಡರು. ಇದೇ ವೇಳೆ, ನಮ್ಮ ಅಭ್ಯರ್ಥಿ ಶಿವರಾಜ ಸಜ್ಜನರ್ಗೆ ಮತ ನೀಡುವಂತೆ ಕೇಳಿಕೊಂಡು ಗಮನ ಸೆಳೆದರು.
ಇದನ್ನೂ ಓದಿ: COVID Update: ರಾಜ್ಯದಲ್ಲಿ 290 ಹೊಸ ಕೇಸ್ ಪತ್ತೆ..10 ಮಂದಿ ಬಲಿ