ಹಾವೇರಿ: ಪೌರತ್ವ ತಿದ್ದುಪಡಿ ಕಾಯ್ದೆಯು ದೇಶದ ಜನರ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ. ಅಷ್ಟೇ ಅಲ್ಲದೆ, ಇಲ್ಲಿನ ನಾಗರಿಕರಿಗೂ, ರಾಷ್ಟ್ರೀಯ ಪೌರತ್ವ ಕಾಯ್ದೆಗೂ ಯಾವುದೇ ಸಂಬಂಧವಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಸ್ಪಷ್ಟಪಡಿಸಿದರು.
ನಗರದಲ್ಲಿ ಮಾತನಾಡಿದ ಅವರು ಮಂಗಳೂರು ಗಲಭೆಯ ವಿಡಿಯೋ ಬಿಡುಗಡೆ ಕುರಿತು ಪ್ರತಿಕ್ರಿಯೆ ನೀಡಿದರು. ಸಿದ್ದರಾಮಯ್ಯನವರು ಪೊಲೀಸರ ಮೇಲೆ ಸುಖಾಸುಮ್ಮನೆ ಅಪವಾದ ಮಾಡುವುದು ಸರಿಯಲ್ಲ ಎಂದರು. ಇನ್ನು ಇದೇ ವೇಳೆ, ಗಲಭೆಯ ವಿಡಿಯೋಗೂ, ಅಲ್ಲಿನ ಘಟನೆಗೂ ಸಂಬಂಧವಿಲ್ಲ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಗಲಭೆ ನಡೆಯುವುದನ್ನ ಮೊದಲೇ ರೆಕಾರ್ಡ್ ಮಾಡಲು ಅದೇನು ಸಿನಿಮಾ ಶೂಟಿಂಗಾ? ಎಂದು ಪ್ರಶ್ನಿಸಿದರು.
ಬರಹಗಾರ ದೇವನೂರು ಮಹದೇವ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಕಾಯ್ದೆ ಸಂವಿಧಾನದ ವಿರುದ್ಧವಾಗಿದ್ದರೇ ಸರ್ವೋಚ್ಚ ನ್ಯಾಯಾಲಯವೇ ಕಾನೂನನ್ನ ತೆಗೆದುಹಾಕುತ್ತಿತ್ತು ಎಂದು ತಿಳಿಸಿದರು.
ಮಂಗಳೂರು ಘಟನೆಯ ತನಿಖೆಯನ್ನು ರಾಜ್ಯ ಸರ್ಕಾರ ಈಗಾಗಲೇ ಸಿಐಡಿಗೆ ಒಪ್ಪಿಸಿದೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸಿಎಎ ಕುರಿತು ತಪ್ಪಾಗಿ ವಿಷಯವನ್ನು ಬಿಂಬಿಸುತ್ತಿವೆ. ಈ ಹಿನ್ನಲೆಯಲ್ಲಿ ಸಿಎಎ ಕುರಿತು ಜನಸಾಮಾನ್ಯರಿಗೆ ಮಾಹಿತಿ ನೀಡಲು ಬಿಜೆಪಿ ಜನಜಾಗೃತಿ ಅಭಿಯಾನವನ್ನು ಕೈಗೊಂಡಿದೆ ಎಂದು ತೇಜಸ್ವಿ ತಿಳಿಸಿದರು.