ಹಾವೇರಿ : ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಅನರ್ಹ ಶಾಸಕ ಬಿ ಸಿ ಪಾಟೀಲ್ ಪರ ಪ್ರಚಾರ ನಡೆಸಲು ಸಿಎಂ ಯಡಿಯೂರಪ್ಪ ಹಿರೇಕೆರೂರಿಗೆ ಆಗಮಿಸಲಿದ್ದಾರೆ.
ಹಿರೇಕೆರೂರು ಕ್ಷೇತ್ರ ವ್ಯಾಪ್ತಿಯ ರಟ್ಟೀಹಳ್ಳಿ ಪಟ್ಟಣದ ನಾರಾಯಣ ಶೆಟ್ಟಿ ಮೈದಾನದಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಿರುವ ಅವರು ಬಿ ಸಿ ಪಾಟೀಲ್ ಪರ ಮತಯಾಚನೆ ನಡೆಸಲಿದ್ದಾರೆ. ಮಧ್ಯಾಹ್ನ ಒಂದು ಗಂಟೆಗೆ ರಟ್ಟೀಹಳ್ಳಿಗೆ ಆಗಮಿಸಲಿರುವ ಸಿಎಂ ಯಡಿಯೂರಪ್ಪ ಜೊತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಇತ್ತ ಕಾಂಗ್ರೆಸ್ ಅಭ್ಯರ್ಥಿ ಬಿ ಹೆಚ್ ಬನ್ನಿಕೋಡ್ ಕೂಡ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದು, ಇಂದು ಹಿರೇಕೆರೂರು ಕ್ಷೇತ್ರದ ಬಾಳಂಬೀಡ, ಹಾದ್ರಿಹಳ್ಳಿ, ಅಬಲೂರು, ನೂಲಗೇರಿ, ಮತ್ತೀಹಳ್ಳಿ, ಡಮ್ಮಳ್ಳಿ, ಕಾರಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಬನ್ನಿಕೋಡಗೆ ಸ್ಥಳೀಯ ಮುಖಂಡರು ಸಾಥ್ ನೀಡಲಿದ್ದಾರೆ.