ಹಾವೇರಿ : ಜಿಲ್ಲೆಯ ಹಾನಗಲ್ ತಾಲೂಕಿನ ಉಪ್ಪುಣಸಿ ಗ್ರಾಮದ ಬಾಲಕನ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರವೀಣ ಮತ್ತು ಕುಮಾರ್ ಬಂಧಿತ ಆರೋಪಿಗಳು. ಮಾರ್ಚ್ 23ರಂದು ಉಪ್ಪುಣಸಿ ಗ್ರಾಮದ ಹರೀಶಯ್ಯ ಕಿಮ್ಸ್‌ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ. ಈತನ ಸಾವಿಗೆ ಶಿವರುದ್ರಪ್ಪ ಹಾವೇರಿ ಸೇರಿ ಐವರು ಕಳ್ಳತನ ಆರೋಪ ಹೊರಿಸಿ ದಂಡಿಸಿದ್ದರು ಎನ್ನಲಾಗಿದೆ.
ಆರೋಪಿಗಳು ಮಾರ್ಚ್ 16ರಂದು ಹರೀಶನನ್ನ ಥಳಿಸಿದ್ದರು. ತೀವ್ರ ಅಸ್ವಸ್ಥಗೊಂಡ ಹರೀಶನನ್ನ ಮೊದಲು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ನಂತರ ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಹರೀಶ್ ಸಾವನ್ನಪ್ಪಿದ್ದ. ಈ ಘಟನೆಗೆ ಕಾರಣ ಎನ್ನಲಾದ 4 ಜನರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಓರ್ವ ಪಿಎಸ್ಐ ಮತ್ತು ಮೂವರು ಪೊಲೀಸ್ ಸಿಬ್ಬಂದಿ ಅಮಾನತು:
ಬಾಲಕನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಪಿಎಸ್ಐ ಮತ್ತು ಮೂವರು ಪೊಲೀಸ್ ಸಿಬ್ಬಂದಿಯನ್ನ ಅಮಾನತು ಮಾಡಲಾಗಿದೆ. ಈ ಘಟನೆ ವಿಧಾನ ಪರಿಷತ್‌ನಲ್ಲಿ ಚರ್ಚೆಗೊಳಗಾಗಿತ್ತು. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಉಸ್ತುವಾರಿ ಜಿಲ್ಲೆಯಲ್ಲಿ ಈ ರೀತಿಯಾಗಿರುವುದಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.
ಈ ಹಿನ್ನೆಲೆ ಕರ್ತವ್ಯದಲ್ಲಿ ವಿಳಂಭ ಧೋರಣೆ ಅನುಸರಿಸಿದ್ದಕ್ಕೆ ಪಿಎಸ್ಐ ಮತ್ತು ಮೂವರು ಹೆಡ್ ಕಾನ್ಸ್ಸ್ಟೇಬಲ್ಗಳನ್ನ ಅಮಾನತು ಮಾಡಲಾಗಿದೆ. ಆಡೂರು ಪೊಲೀಸ್ ಠಾಣೆಯ ಪಿಎಸ್ಐ ಆಂಜನೇಯ, ಹೆಡ್ ಕಾನ್ಸ್ಸ್ಟೇಬಲ್ಗಳಾದ ಜಿ ಎಸ್ ಉಜ್ಜನಗೌಡ್ರ, ಅಶೋಕ್ ಭಜಂತ್ರಿ, ಎನ್ ಜಿ ಬೆಟಗೇರಿ ಅವರನ್ನು ಅಮಾನತು ಮಾಡಿ ಪೊಲೀಸ್ ಹಿರಿಯ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.