ಹಾವೇರಿ: ವೈದ್ಯನೊಬ್ಬ ತನ್ನ ದೊಡ್ಡಮ್ಮನ ಮಗನನ್ನೇ ಕೊಂದು ಹಾಕಿ, ಬಳಿಕ ಏನು ಗೊತ್ತಿಲ್ಲದಂತೆ ನಟಿಸಿದ್ದ ಘಟನೆ ಹಾವೇರಿಯ ಸೋಮನಕಟ್ಟಿಯಲ್ಲಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ ಪೊಲೀಸರು ಕೊಲೆ ವಿಷಯ ತಿಳಿಸುತ್ತಿದ್ದಂತೆ ಸಂಬಂಧಿಕರ ಜೊತೆ ಶವ ನೋಡಲು ಸಹ ಆ ವೈದ್ಯ ಬಂದಿದ್ದರು. ಹಾವೇರಿ ತಾಲೂಕಿನ ಸೋಮನಕಟ್ಟಿ ಗ್ರಾಮದ ಬಳಿ ಜು. 28 ರಂದು ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿತ್ತು. ಶವವನ್ನ ನೋಡಿದ ಪೊಲೀಸ್ ಸಿಬ್ಬಂದಿ ಅಲ್ಲಿ ಸಿಕ್ಕ ಡ್ರೈವಿಂಗ್ ಲೈಸೆನ್ಸ್ ಮೇಲೆ ಆತ 26 ವರ್ಷದ ನವೀನ್ ರಾಥೋಡ್ ಎಂಬುದನ್ನು ಗುರುತಿಸಿದ್ದರು.
ನವೀನ್ ಮೂಲತಃ ಗದಗ ಜಿಲ್ಲೆಯವನಾಗಿದ್ದು, ತಂದೆ-ತಾಯಿ ಇಲ್ಲದ ಕಾರಣ ವಿಜಯನಗರ ಜಿಲ್ಲೆ ಹೂವಿನಹಡಗಲಿಯಲ್ಲಿ ತನ್ನ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದ ಎನ್ನಲಾಗ್ತಿದೆ. ಶವ ಪತ್ತೆಯಾಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಗುತ್ತಲ ಪೊಲೀಸರು ತನಿಖೆ ಕೈಗೊಂಡಿದ್ದರು. ಸಿಪಿಐ ನಾಗಮ್ಮ ಸೇರಿದಂತೆ ಪಿಎಸ್ಐ ಜಗದೀಶ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡಿದ್ದರು. ಇದೀಗ ತನಿಖೆಯಲ್ಲಿ ನವೀನನ್ನು ಆತನ ಚಿಕ್ಕಮ್ಮನ ಮಗನೇ ಕೊಲೆ ಮಾಡಿರುವ ಅಂಶ ಬೆಳಕಿಗೆ ಬಂದಿದೆ.
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿದ್ದ ಡಾ. ಚಿರಂಜೀವಿಯೇ ಕೊಲೆ ಆರೋಪಿ. ಆರೋಪಿ ಡಾ. ಚಿರಂಜೀವಿ ತಮ್ಮ ಸಹಾಯಕ ಪ್ರಶಾಂತ್ ಸಹಾಯದಿಂದ ಈ ಕೊಲೆ ಮಾಡಿದ್ದಾರೆ ಎಂಬ ಅಂಶ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.
ಮೃತ ನವೀನ್ ದುಶ್ಚಟಗಳ ದಾಸನಾಗಿದ್ದ, ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತ ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ವಾಸವಾಗಿದ್ದ. ಅಲ್ಲದೆ ಹಣಕ್ಕಾಗಿ ಪೀಡಿಸುತ್ತಿದ್ದ. ಮನೆಗೆ ಯಾವಾಗಬೇಕೋ ಅವಾಗಲೆಲ್ಲಾ ಬಂದು ಹಣಕ್ಕಾಗಿ ಪೀಡಿಸುತ್ತಿದ್ದ. ಕೆಲವು ಬಾರಿ ಹೆದರಿಸುತ್ತಿದ್ದನಂತೆ. ಈ ಹಿನ್ನೆಲೆ ಆತನನ್ನು ಕೊಲೆ ಮಾಡಿರುವುದಾಗಿ ವೈದ್ಯ ಡಾ.ಚಿರಂಜೀವಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ: ಹಾವೇರಿ : ಹೆದ್ದಾರಿ ಬದಿ ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಪತ್ತೆ
ನವೀನನಿಗೆ ಮದ್ಯಕುಡಿಯುವ, ಗಾಂಜಾ ಸೇದುವ ಚಟವಿತ್ತು. ಈ ಹಿನ್ನೆಲೆಯಲ್ಲಿ ತನ್ನ ಸಹಾಯಕ ಪ್ರಶಾಂತ ಮತ್ತು ನಾನು ನವೀನಗೆ ಮದ್ಯದಲ್ಲಿ ನಿದ್ದೆ ಮಾತ್ರೆ ಹಾಕಿ ನಂತರ ಕೊಲೆ ಮಾಡಿ ಶವವನ್ನ ಸೋಮನಕಟ್ಟಿ ಗ್ರಾಮದ ಬಳಿ ಎಸೆದುಹೋಗಿದ್ದೇವು ಎಂದು ವೈದ್ಯ ಡಾ.ಚಿರಂಜೀವಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ವಿಚಿತ್ರ ಅಂದರೆ 28 ರಂದು ಕೊಲೆ ನಡೆದ ಪ್ರದೇಶಕ್ಕೆ ಡಾ.ಚಿರಂಜೀವಿ ಸಂಬಂಧಿಕರ ಜೊತೆ ಆಗಮಿಸಿದ್ದ. ಅಲ್ಲದೆ ಮಾಧ್ಯಮಗಳಿಗೆ ಬೈಟ್ ಸಹ ನೀಡಿದ್ದ.